

ಹಾವೇರಿ: ಬಿಜೆಪಿಯವರು ಸಂವಿಧಾನ ತೆಗೆದು ಹಾಕುವ ಹುನ್ನಾರ ಮಾಡುತ್ತಿದ್ದು, ಅದಕ್ಕಾಗಿಯೇ ನರೇಂದ್ರ ಮೋದಿ ಅವರು 400 ಸೀಟು ಕೇಳುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಬಡವರಿಗೆ, ಮಹಿಳೆಯರಿಗೆ ಇರುವ ಸಾಮಾನ್ಯ ಹಕ್ಕು ತೆಗೆದು ಹಾಕುವುದೇ ಅವರ ಗುರಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.
ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಲ್ಲಿ ಎಲ್ಲರೂ ಸಮಾನರು. ಸಂವಿಧಾನ ತೆಗೆದುಹಾಕಲು ಹುನ್ನಾರ ನಡೆಸಿರುವ ಬಿಜೆಪಿಗೆ ಏನಾದರೂ ನೀವು ವೋಟ್ ಮಾಡಿದ್ರೆ ನಿಮ್ಮ ಕಾಲಿಗೆ ನೀವೇ ಕೊಡಲಿ ಹಾಕಿಕೊಂಡಂತೆ. ದೀನ ದಲಿತರ ಹಕ್ಕು, ಸಮಾನತೆಯ ಹಕ್ಕು ನಿರ್ನಾಮ ಮಾಡುತ್ತಾರೆ. ನಿಮ್ಮ ಜುಟ್ಟು ಶ್ರೀಮಂತರಾದ ಅಂದಾನಿ, ಅಂಬಾನಿ ಕೈಯಲ್ಲಿ ಇರುತ್ತದೆ ಎಂದರು.
ಈ ದೇಶದ ಒಟ್ಟು ಸಂಪತ್ತನಲ್ಲಿ 40 ಭಾಗ, ಶೇ.1 ಜನರ ಕೈಯಲ್ಲಿದೆ. ದುಡಿಯುವ ಜನರು ಶೇ.90ರಷ್ಟು ಇದ್ದಾರೆ, ಇವರ ಬಳಿ ಶೇ.10ರಷ್ಟು ಸಂಪತ್ತು ಮಾತ್ರ ಇದೆ. ಇನ್ನುಳಿದ ಶೇ.90ರಷ್ಟು ಆಸ್ತಿ ಶ್ರೀಮಂತರ ಬಳಿ ಇದೆ. ಎಲ್ಲದರ ಮೇಲೆಯೂ ತೆರಿಗೆ, ಜಿಎಸ್‌ಟಿ ಹೀಗೆ ನಾನಾ ರೀತಿಯಲ್ಲಿ ಬಡವರ ಮೇಲೆ ಮೋದಿ ಸರ್ಕಾರ ಹಾಕುತ್ತಿದೆ ಎಂದರು.
ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ರೈತರ ಸಾಲಮನ್ನಾ ಮಾಡಿದರೆ ದೇಶ ಬರ್ಬಾದ್ ಆಗುತ್ತೆ ಅಂತಾರೆ. ಅದಾನಿ, ಅಂಬಾನಿ ಅವರ ಸಾಲ ಯಾಕೆ ಇವರು ಮನ್ನಾ ಮಾಡಿದರು ? ಎಂದು ಪ್ರಶ್ನಿಸಿದ ಅವರು ಈ ಬಾರಿ ಕಾಂಗ್ರೆಸ್ ಸರ್ಕಾರ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಬಸವರಾಜ ಶಿವಣ್ಣವರ, ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ.ಹಿರೇಮಠ, ಎಸ್.ಎಫ್.ಎನ್.ಗಾಜೀಗೌಡ್ರ, ಇತರರಿದ್ದರು.
ಗಡ್ಡದೇವರಮಠ ಗೆಲ್ಲಿಸಿ…
ವಿದ್ಯಾವಂತ, ಸಜ್ಜನರಾದ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಎಲ್ಲ ಅಧಿಕಾರ ಅನುಭವಿಸಿರುವ ಬಸವರಾಜ ಬೊಮ್ಮಾಯಿ ಅವರು ಶಾಸಕರಿದ್ದು, ಶಾಸಕರಾಗಿಯೇ ಕೆಲಸ ಮಾಡಲಿ. ಆನಂದಸ್ವಾಮಿ ಅವರಿಗೆ ಯಾವುದೇ ಅಧಿಕಾರ ಇಲ್ಲ. ಅವರು ಸಂಸದರಾಗಿ ಕೆಲಸ ಮಾಡಲಿ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.