ಮಹಿಳಾ ವಿರೋಧಿ ಬಿಜೆಪಿ ಕಿತ್ತೆಸೆಯಲು ಇದು ಸದವಕಾಶ; ಕುಳೇನೂರ ಗ್ರಾಮದಲ್ಲಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆ ಕರೆ

28 HVR 4 B
Published on

ಹಾವೇರಿ: ರೈತರ ಬೆಳೆಯ ಬೆಲೆ ದ್ವಿಗುಣಗೊಳಿಸದ, ಭಾವನಾತ್ಮಕವಾಗಿ ಯುವಕರನ್ನು ವಂಚಿಸಿದ, ಅಗತ್ಯ ದಿನಸಿ ವಸ್ತುಗಳ ಬೆಲೆ ಏರಿಸಿದ ಮಹಿಳಾ ವಿರೋಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವ ಸದವಕಾಶವನ್ನು ಮತದಾರರು ಬಳಸಿಕೊಳ್ಳಬೇಕೆಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.
ತಾಲೂಕಿನ ಕುಳೇನೂರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅರವತ್ತು ವರ್ಷ ಅಧಿಕಾರ ನೀಡಿದ್ದೀರಿ. ನಮಗೆ ಅರವತ್ತು ತಿಂಗಳು ಅವಕಾಶ ಕೊಟ್ಟರೆ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಹತ್ತು ವರ್ಷಗಳಲ್ಲಿ ದೇಶದ ಇಡೀ ಆರ್ಥಿಕ ವ್ಯವಸ್ಥೆಯನ್ನೇ ಹದಗೆಡಿಸಿದೆ. ಭಾರತ ಜೋಡೋ ಯಾತ್ರೆಯಲ್ಲಿ ಜನಸಾಮಾನ್ಯರನ್ನು ಸಮೀಪದಿಂದ ಅರಿತ ರಾಹುಲ್ ಗಾಂಧಿ ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿದರೆ, ಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡುವುದರಲ್ಲಿ ಮಗ್ನವಾಗಿದೆ ಎಂದು ಆರೋಪಿಸಿದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳುಗಳ ಮಧ್ಯೆ ನಡೆಯುತ್ತಿದೆ. ಸರ್ವರನ್ನೂ ಸಮಭಾವದಿಂದ ಕಾಣುವ ಕಾಂಗ್ರೆಸ್ ಪಕ್ಷ ರೈತರ, ಮಹಿಳೆಯರ, ಬಡವರ ಪರ ಭಾವನೆಗಳಿಗೆ ಸ್ಪಂದಿಸುತ್ತಿದೆ. ಹದಿನೈದು ವರ್ಷಗಳಲ್ಲಿ ಬಿಜೆಪಿ ಸಂಸದರು ಜನರಿಗೆ ಒಮ್ಮೆಯೂ ಮುಖ ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ಸಂಭಾವಿತ ಸ್ವಭಾವದ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ನನ್ನ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ ಹಾಗೂ ಶಿವನಗೌಡ ಪಾಟೀಲ, ದೇವಿಹೊಸೂರ ಗ್ರಾಪಂ ಅಧ್ಯಕ್ಷೆ ಯಶೋದಮ್ಮ ಮುದಿಗೌಡ್ರ, ಟಿಪ್ಪುಸುಲ್ತಾನ್ ಕಲಕೋಟಿ, ವೀರೇಶ ಮತ್ತಿಹಳ್ಳಿ, ಪ್ರಕಾಶಗೌಡ ಪಾಟೀಲ, ಸುರೇಶಗೌಡ ಪಾಟೀಲ, ನಿರ್ಮಲಾ ಹೊನ್ನತ್ತಿ, ಬಸವರಾಜ ಹೆಡಿಗೊಂಡ, ಶಾಂತಪ್ಪ ಹಾವೇರಿ, ಗಣೇಶಪ್ಪ ಸವೂರ, ಹೊಳಿಯಪ್ಪ ಸೂರದ, ನಿಂಗಪ್ಪ ನಿಂಬಕ್ಕನವರ, ಇತರರು ಉಪಸ್ಥಿತರಿದ್ದರು.

ಬುಕ್ ಮಾಡುವುದು ಬಿಜೆಪಿಗರ ಭ್ರಮೆ
ಮತದಾನ ಸಮೀಪಿಸುತ್ತಿದ್ದಂತೆ ಎರಡು- ಮೂರು ದಿನಗಳಲ್ಲಿ ಚುನಾವಣಾ ಕಾವು ಬದಲಿಸುವುದಾಗಿ ಬಿಜೆಪಿ ತಿಳಿದಿದೆ. ನಮ್ಮ ಪಕ್ಷದವರನ್ನು ಬುಕ್ ಮಾಡಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ ಮಾತ್ರ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಕೋಟ್
ಬಡವರ ಬದುಕಿಗೆ ಆರ್ಥಿಕ ಶಕ್ತಿ ತುಂಬಿರುವ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದಾಗಿ ಹೇಳುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ. ಮತ ಪತ್ರದಲ್ಲಿ ಕ್ರಮ ಸಂಖ್ಯೆ ಒಂದಕ್ಕೆ ಮತ ನೀಡಿ ಆಶೀರ್ವದಿಸಿ. ನಿಮ್ಮ ಸೇವೆಗೆ ಒಂದು ಅವಕಾಶ ಮಾಡಿಕೊಡಿ.
- ಆನಂದಸ್ವಾಮಿ ಗಡ್ಡದೇವರಮಠ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net