ಎಂಟು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ; ಹಸ್ತದ ಶಕ್ತಿ ದೇಶದ ಶಕ್ತಿ; ದುಂಡಶಿ ಗ್ರಾಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ

7 HVR 1 A
Published on

ಹಾವೇರಿ/ ಶಿಗ್ಗಾಂವಿ: ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್‌ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಇನ್ನು ಮೂರು ವರ್ಷ ಸೇರಿ ಮುಂದಿನ ಎಂಟು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇರುತ್ತದೆ. ಕಾಂಗ್ರೆಸ್‌ನ ಯಾವುದೇ ಕಾರ್ಯಕ್ರಮವನ್ನೂ ನಿಲ್ಲಿಸಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರವಸೆ ನೀಡಿದರು. ಶಿಗ್ಗಾಂವಿ ತಾಲೂಕಿನ ದುಂಡಶಿ ಗ್ರಾಮದಲ್ಲಿ ಕಾಂಗ್ರೆಸ್‌ನಿಂದ ಗುರುವಾರ ಆಯೋಜಿಸಿದ್ದ ರೋಡ್ ಶೋನಲ್ಲಿ ಭಾಗವಹಿಸಿ, ನಂತರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸೇವಾಲಾಲ ಜಯಂತಿ ಮಾಡಿದ್ದು, ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈ ದೇಶದಲ್ಲಿ ಏನೇನು ಅಭಿವೃದ್ಧಿ ಆಗಿದೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದರು.

ಬೊಮ್ಮಾಯಿ ಅವರೇ ನಿಮ್ಮ ನಾಯಕತ್ವದ ಎರಡೂವರೆ ವರ್ಷದ ಆಡಳಿತದಲ್ಲಿ ನೀವು ಒಂದಾದರೂ ಸಾಕ್ಷಿಬಂಡೆ ಬಿಟ್ಟಿದ್ದರೆ ತಿಳಿಸಿ. ಜನಸಾಮಾನ್ಯರು ನೇರವಾಗಿ ಬೊಮ್ಮಾಯಿ ಅವರನ್ನು ಭೇಟಿ ಮಾಡೋಕೆ ಆಗುತ್ತದಾ. ಅವರನ್ನು ಭೇಟಿ ಮಾಡಲು ಏಜೆಂಟರು, ಲೀಡರ್ ಬೇಕಂತೆ ಎಂದು ಕುಟುಕಿದರು. ನಿಮ್ಮ ಹಾಗೂ ಮೋದಿ ಅವರ ಆಡಳಿತದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರಿಂದ ಬೇಸತ್ತ ಜನರ ಸಹಾಯಕ್ಕೆ ಗ್ಯಾರಂಟಿಗಳ ಮೂಲಕ ರಾಜ್ಯ ಸರ್ಕಾರ ನಿಂತಿದೆ ಎಂದರು.

ಮನಮೋಹನ ಸಿಂಗ್, ಸಿದ್ದರಾಮಯ್ಯ ಕಾಲದಲ್ಲಿ ಸಾಲಮನ್ನಾ ಮಾಡಲಾಯಿತು. ಕರೊನಾ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಲಿಲ್ಲ. ಯಾವ ಧೈರ್ಯದಿಂದ ಓಟು ಕೇಳುತ್ತೀರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪ್ರತಿ ತಿಂಗಳು ಮಹಿಳೆಗೆ ಸುಮಾರು ಐದು ಸಾವಿರ ರೂ. ಕೊಡುತ್ತಿದೆ. ಬೊಮ್ಮಾಯಿ ಈಗಾಗಲೇ ಸಂಸದರಿದ್ದಾರೆ. ಯಾಸೀರ್‌ಖಾನ್ ಪಠಾಣರನ್ನು ಗೆಲ್ಲಿಸಿ ಕೊಡಿ ಎಂದು ಕೋರಿಕೊಂಡರು.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ದೇಶಭಕ್ತಿ ಅನ್ನೋದನ್ನ ಬಿಜೆಪಿಯವರು ಗುತ್ತಿಗೆ ಪಡೆದಂತೆ ಮಾಡುತ್ತಾರೆ. ಭಾರತ್ ಮಾತಾಕಿ ಜೈ ಅಂದು ಸುಮ್ಮನೆ ಕೂರುತ್ತಾರೆ. ಅವರ ಬಂಡವಾಳ ಇಷ್ಟೇ. ನಾವು ಹುಷಾರಾಗಬೇಕು. ಕಳಸಾ ಬಂಡೂರಿಗಾಗಿ ಪಾದಯಾತ್ರೆ ಮಾಡಿದವರು ಬೊಮ್ಮಾಯಿ. ಸಿಎಂ ಆದರೂ ಬಗೆಹರಿಸಲು ಆಗಲಿಲ್ಲ. ಪಠಾಣಗೆ ಕಳೆದ ಸಲ ತಡವಾಗಿ ಟಿಕೆಟ್ ಸಿಕ್ಕಿತ್ತು. ಈ ಸಲ ಕುಂಡಲಿ ಹಿಡಿದೇ ಟಿಕೆಟ್ ಘೋಷಿಸಿದ್ದು, ಗೆಲುವು ನಿಶ್ಚಿತ ಎಂದು ಹೇಳಿದರು.

ರ‌್ಯಾಲಿಯಲ್ಲಿ ಸಚಿವರಾದ ಈಶ್ವರ ಖಂಡ್ರೆ, ಎಚ್.ಕೆ.ಪಾಟೀಲ, ಶಿವಾನಂದ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ವಿನಯ ಕುಲಕರ್ಣಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ, ಶಾಸಕರಾದ ಲಕ್ಣ್ಮಣ ಸವದಿ, ರುದ್ರಪ್ಪ ಲಮಾಣಿ, ಎನ್.ಎಚ್.ಕೋನರಡ್ಡಿ, ಪ್ರಕಾಶ ಹುಕ್ಕೇರಿ, ಮಂಜುನಾಥ ಕುನ್ನೂರ, ರಾಜು ಕುನ್ನೂರ, ಪ್ರಕಾಶ ರಾಠೋಡ, ಜಲಜಾ ನಾಯಕ, ಬಿ.ಆರ್.ಯಾವಗಲ್ಲ, ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ, ಎ.ಎಂ.ಹಿಂಡಸಗೇರಿ, ರಾಮಣ್ಣ ಲಮಾಣಿ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬೊಮ್ಮಾಯಿ ಕೈಯಲ್ಲಿ ಲಿಂಬಿಹಣ್ಣು ?

ನನ್ನ ಮಗನನ್ನು ನಿಲ್ಲಿಸಲ್ಲ ಎಂದಿದ್ದರು ಬೊಮ್ಮಾಯಿ. ಈಗ ಎಲೆಕ್ಷನ್ ನಿಂತಿರುವುದು ನಿಮ್ಮ ಮಗನೋ ಅಥವಾ ಬೇರೆಯವರೋ ಎಂದು ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಪ್ರಶ್ನಿಸಿದರು. ಮುಖ್ಯಮಂತ್ರಿಯಾಗಿ ಬಿಜೆಪಿ ಸರ್ವನಾಶ ಮಾಡಿದ ಖ್ಯಾತಿ ಬೊಮ್ಮಾಯಿಗೆ ಸಲ್ಲುತ್ತದೆ. ನಾಲ್ಕು ಬಾರಿ ಕೈಯಾಗ ಲಿಂಬಿ ಹಣ್ಣು ಹಿಡಿದು ಉರುಳಿಸಿ ಗೆದ್ದಿದ್ದೀರಿ. ಈ ಸಲ ಜನ ಆ ಲಿಂಬಿಹಣ್ಣು ತುಳಿದು ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net