

ಹಾವೇರಿ: ಕೇಂದ್ರ ಸರ್ಕಾರ ಕೇವಲ ನಾಲ್ವರು ಶ್ರೀಮಂತ ಉದ್ಯಮಿಗಳ ಬರೋಬ್ಬರಿ 4 ಲಕ್ಷ 36 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಬಡವರು, ರೈತರು, ದೀನ ದಲಿತರ ಬಗ್ಗೆ ಬಿಜೆಪಿಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ವಿನಯ ಕುಲಕರ್ಣಿ ಟೀಕಿಸಿದರು.
ನಗರದ ಶಿವಶಕ್ತಿ ಪ್ಯಾಲೇಸನಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭೋವಿ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಸಹ ಬಿಜೆಪಿಯ ಯಾವೊಬ್ಬ ಸಂಸದನೂ ಸಹ ಬಾಯಿ ಬಿಡಲಿಲ್ಲ. ವಿರೋಧ ಪಕ್ಷಗಳ ನಾಯಕರಿಗೆ ಅನಗತ್ಯವಾಗಿ ಕಿರುಕುಳ ನೀಡಿ, ಭಯ ಹುಟ್ಟಿಸುವುದೇ ಬಿಜೆಪಿಯ ಸಾಧನೆಯಾಗಿದೆ ಎಂದು ಜರಿದರು.
ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲ ಅಧಿಕಾರವೂ ಸಿಕ್ಕಿದೆ. ಸೋತರೂ ಅವರು ಶಾಸಕರಾಗಿ ಮುಂದುವರೆಯಲಿದ್ದಾರೆ. ಹಾಗಾಗಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಅವಕಾಶ ಮಾಡಿಕೊಡಿ. ಸಂಸತ್ತಿನಲ್ಲಿ ಗಟ್ಟಿಧ್ವನಿ ಮೊಳಗಿಸಿ ಕ್ಷೇತ್ರ ಮತ್ತು ರಾಜ್ಯಕ್ಕೆ ನ್ಯಾಯ ದೊರಕಿಸುವಲ್ಲಿ ಅವರು ಸಮರ್ಥರಿದ್ದಾರೆ ಎಂದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಶೋಷಿತರು, ದಮನಿತರಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಪಕ್ಷ ಕಾಂಗ್ರೆಸ್. ಮೀಸಲಾತಿ ಅವಕಾಶ ಕಲ್ಪಿಸಿ ಅವಕಾಶ ದೊರಕಿಸಿದ್ದು ಕಾಂಗ್ರೆಸ್. ಇದನ್ನು ಯುವಪೀಳಿಗೆಗೆ ಅರ್ಥ ಮಾಡಿಸುವ ಕೆಲಸ ನಡೆಯಬೇಕಿದೆ. ಭೋವಿ ಸಮಾಜಕ್ಕೆ ಹಕ್ಕು, ಪ್ರಾತಿನಿಧ್ಯ ಸಿಕ್ಕಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಮೊದಲಿನಿಂದಲೂ ಸಾಮಾಜಿಕ ನ್ಯಾಯದ ಪರವಿರುವ ಕಾಂಗ್ರೆಸ್ ಎಲ್ಲ ವರ್ಗಗಳಿಗೂ ಸಹ ಸಮಾನವಾಗಿ ಕಂಡು ಶಕ್ತಿ ತುಂಬುವ ಕೆಲಸ ಮಾಡಿದೆ. ಬಿಜೆಪಿ ಸಂವಿಧಾನ ಬದಲಿಸಿ ಹಕ್ಕು ಕಸಿಯುವ ಹುನ್ನಾರ ನಡೆಸಿದೆ. ಕೊಲೆ, ಕಳ್ಳತನದ ಪ್ರಕರಣಗಳನ್ನು ಮುಂದಿಟ್ಟುಕೊಂಡು ಮತ ಕೇಳುವ, ರಾಜಕೀಯ ಬೇಳೆ ಬೇಯಿಸಿಕೊಳ್ಳುವಂಥ ದಯನೀಯ ಸ್ಥಿತಿಗೆ ಬಿಜೆಪಿ ಬಂದಿದೆ ಎಂದು ಟೀಕಿಸಿದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಾಜೇಶ್ವರಿ ಪಾಟೀಲ, ಭೋವಿ ಸಮಾಜದ ಅಧ್ಯಕ್ಷ ರವಿ ಪೂಜಾರ, ಮುಖಂಡರಾದ ನಾಗಪ್ಪ ಬಂಡಿವಡ್ಡರ, ಬಸಣ್ಣ ಹೆಸರೂರು, ದುರ್ಗಪ್ಪ ನೀರಲಗಿ, ಬಿ.ಬಿ.ಬತ್ತಿಕೊಪ್ಪ, ರಮೇಶ ಸುತ್ತಕೋಟಿ, ಕೊಟ್ರಪ್ಪ ಕುದರಿಸಿದ್ದನವರ, ವೆಂಕಟೇಶ ದೊಡ್ಡಮನಿ, ಸುರೇಶ ಸವಣೂರು, ಜಗದೀಶ ಸವಣೂರು, ಆಂಜನೇಯ ಬಂಕಾಪೂರ, ಸುನೀಲ ಭೋವಿ, ರಾಮಚಂದ್ರ ಕಲ್ಲೇರ ಇತರರು ಉಪಸ್ಥಿತರಿದ್ದರು.