ಹಾವೇರಿ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕಾರ್ಯ ಸ್ಥಗಿತಗೊಳಿಸಿದ ಎಂಟು ಸೌಹಾರ್ದ ಸಹಕಾರಿ ಸಂಘಗಳನ್ನು ಸಮಾಪನೆಗೊಳಿಸಲು ಕ್ರಮ ವಹಿಸಲಾಗುವುದು ಎಂದು ಹಾವೇರಿ ಉಪ ವಿಭಾಗದ ಸಹಕಾರಿಗಳ ಸಹಾಯಕ ನಿಬಂಧಕ ವಿಕ್ರಮ ಕುಲಕರ್ಣಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಹಾವೇರಿಯ ಶ್ರೀ ಸಪ್ತಗಿರಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ನವಜ್ಯೋತಿ ವಿವಿದೋದ್ಧೇಶಗಳ ಸೌಹಾರ್ದ ಸಹಕಾರಿ ನಿ., ದೀನದಲಿತರ ಅನುಪಯೋಗಿ ವಸ್ತುಗಳ ಮಾರಾಟಗಾರರ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ನಿ, ಬ್ಯಾಡಗಿಯ ರಾಜೇಶ್ವರಿ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ನಿ., ರಾಣೆಬೆನ್ನೂರಿನ ರಾಜಮಾತಾ ಜೀಜಾಬಾಯಿ ಮಹಿಳಾ ಪತ್ತಿನ ಸೌಹಾರ್ದ ನಿ, ಕೂನಬೇವು ರಾಣೆಬೆನ್ನೂರ ತೋಟಗಾರಿಕಾ ಬೆಳಗಾರರ ಮಾರಾಟ ಹಾಗೂ ಸಂಸ್ಕರಣ ಸೌಹಾರ್ದ ನಿ., ಯಲಗಚ್ಚನ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ. ಹಾಗೂ ಹಿರೇಕೆರೂರಿನ ಏಕಲವ್ಯ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಸಂಘಗಳ ಪರಿವೀಕ್ಷಣೆ ನಡೆಸಲಾಗಿ, ಈ ಸಹಕಾರಿ ಸಂಘಗಳು ಕಳೆದ ಐದಾರು ವರ್ಷಗಳಿಂದ ಕಾರ್ಯನಿರ್ವಹಿಸದೇ ಇರುವುದು ತಿಳಿದು ಬಂದಿದೆ.
ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರ ಕಲಂ 48(2) ಅನ್ವಯ ಯಾವುದೇ ಸಂಘ ಎರಡು ವರ್ಷ ಕಾರ್ಯ ಸ್ಥಗಿತಗೊಳಿಸಿದ್ದಲ್ಲಿ ಅಂತಹ ಸಂಘವನ್ನು ಸಂಯುಕ್ತ ಸಹಕಾರಿಯ ಶಿಫಾರಸ್ಸಿನ ಮೇರೆಗೆ ಸಮಾಪನೆ ಮಾಡಬಹುದಾಗಿದೆ. ಸಂಘಗಳು ಉಪವಿಧಿಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿದೆಯೇ ಮತ್ತು ಕಾಲಕಾಲಕ್ಕೆ ನಿಗದಿತ ಅವಧಿಯೊಳಗಾಗಿ ವಾರ್ಷಿಕ ವರದಿಯನ್ನು ಸಲ್ಲಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ವರದಿ ಸಲ್ಲಿಸಬೇಕು. ತಪ್ಪಿದಲ್ಲಿ ಸಂಘವನ್ನು ಸಮಾಪನಗೊಳಿಸಿ ಸಮಾಪನಾಧಿಕಾರಿಯನ್ನು ನೇಮಿಸಲಾಗುವುದು ಎಂದು ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೂ ಈ ಸಂಘಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಪ್ರಕಟಣೆಗೂ ಪ್ರತಿಕ್ರಿಯೆ ನೀಡದಿದ್ದರೆ ಸೌಹಾರ್ದ ಸಹಕಾರ ಸಂಘಗಳನ್ನು ಆ.5ರಂದು ಸಮಾಪನೆಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.