ಹಾವೇರಿ ಮೊದಲ ಪ್ರಜೆಗಿಲ್ಲ ಸರ್ಕಾರಿ ವಾಹನ !; ಸ್ವಂತ ವಾಹನದಲ್ಲಿ ನಗರಸಭೆ ಅಧ್ಯಕ್ಷೆ ನಗರ ಪ್ರದಕ್ಷಿಣೆ; ಡೀಸೆಲ್, ಚಾಲಕನ ಖರ್ಚಿಗೂ ಸಿಎಂಸಿಗೆ ಬರ

18 CMC Car
Published on

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರಸಭೆ ಅಧ್ಯಕ್ಷೆ, ನಗರದ ಪ್ರಥಮ ಪ್ರಜೆ ಶಶಿಕಲಾ ರಾಮು ಮಾಳಗಿ ಅವರಿಗೆ ಸರ್ಕಾರಿ ವಾಹನ ಸೌಲಭ್ಯ ಕಲ್ಪಿಸದ ಹಿನ್ನೆಲೆ ಅಧ್ಯಕ್ಷರು ಒಂದೂವರೆ ತಿಂಗಳಿಂದ ಸ್ವಂತ ವಾಹನದಲ್ಲಿ ಸ್ವಂತ ಖರ್ಚಿನಲ್ಲಿ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ.

ಎಂಟು ತಿಂಗಳ ಹಿಂದೆ ನಗರಸಭೆಯ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ದಲಿತ ಮಹಿಳೆ ಶಶಿಕಲಾ ಮಾಳಗಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಸಮಸ್ಯೆ ಕಂಡುಬಂದ ತಕ್ಷಣವೇ, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದಾರೆ. ಪೌರಾಯುಕ್ತರು ಇಲ್ಲದ ಸಂದರ್ಭದಲ್ಲೂ ಅನೇಕ ಕೆಲಸಗಳನ್ನು ಒಂಟಿಯಾಗಿ ನಿಭಾಯಿಸಿದ್ದಾರೆ.

ನಗರದ ಪ್ರಥಮ ಪ್ರಜೆಗೆ ನಗರಸಭೆ ಸುಸಜ್ಜಿತವಾದ ವಾಹನ ಸೌಕರ್ಯ ಒದಗಿಸಬೇಕಿತ್ತು. ಆದರೆ, ಆರ್ತಿಕ ಮುಗ್ಗಟ್ಟು, ಹಣಕಾಸಿ, ಸಮಸ್ಯೆ ಅಥವಾ ಆಂತರಿಕ ಸಮಸ್ಯೆಗಳ ಕಾರಣಕ್ಕೆ ಅಧ್ಯಕ್ಷರು ಸರ್ಕಾರಿ ವಾಹನದಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.

ನಗರಸಭೆ ಅಧ್ಯಕ್ಷರಿಗೆ ಆರಂಭದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕಾರು ಒದಗಿಸಿತ್ತು. ಆದರೆ, ಯಾವುದೇ ಟೆಂಡರ್ ಕೂಡ ಮಾಡದೇ ಕಾರಿನ ಮಾಲೀಕರಿಗೆ ಶುಲ್ಕವನ್ನೂ ಭರಿಸದೇ ಕಾರು ಒದಗಿಸಿತ್ತು. ಚಾಲಕನ ಮತ್ತು ಡೀಸೆಲ್ ಖರ್ಚು ಭರಿಸಲು ಹಿಂದೇಟು ಹಾಕಿತ್ತು. ಹಾಗಾಗಿ, ಅಧ್ಯಕ್ಷರು ಸ್ವಂತ ಖರ್ಚಿನಲ್ಲಿ ಚಾಲಕನ ಮತ್ತು ಡೀಸೆಲ್ ಖರ್ಚು ಭರಿಸಿಕೊಂಡು ಆರೇಳು ತಿಂಗಳಿನಿಂದ ನಗರಸಭೆಯ ಕೆಲಸಗಳನ್ನು ಮಾಡುತ್ತಿದ್ದರು. ಕೊನೆಗೂ ಕಾರು ಒದಗಿಸದ ಹಿನ್ನೆಲೆಯಲ್ಲಿ ಆ ಕಾರು ಬಿಟ್ಟು 50 ದಿನಗಳಿಂದ ಸ್ವಂತ ಕಾರಲ್ಲೇ ಓಡಾಡುತ್ತಿದ್ದಾರೆ.

ಇನ್ನಾದರೂ ನಗರಸಭೆ ಪೌರಾಯುಕ್ತರು ಹಾಗೂ ಸಂಬಂಧಪಟ್ಟ ಮೇಲಧಿಕಾರಿಗಳು ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕು. ನಗರಸಭೆಯಿಂದ ಸ್ವಂತ ವಾಹನ ಖರೀದಿಸಬೇಕು. ಅಥವಾ ಟೆಂಡರ್ ಕರೆದು ಅಧ್ಯಕ್ಷರಿಗೆ ಕಾರು, ಚಾಲಕ ಹಾಗೂ ಡೀಸೆಲ್ ಖರ್ಚಿನ ಸೌಲಭ್ಯ ಒದಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಸಿಎಂಸಿ ಮಾನ ಹರಾಜು ?

ಹಲವು ಬಾರಿ ಪೌರಾಯುಕ್ತರಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಗರಸಭೆಯ ಎರ್ಟಿಗಾ ಕಾರು ವಾಪಸ್ ಕೊಟ್ಟು, ಸ್ವಂತ ಸ್ಕಾರ್ಪಿಯೋ ಕಾರಿನಲ್ಲಿ ಅಧ್ಯಕ್ಷರು ನಗರಸಭೆ ಕೆಲಸ ಕಾರ್ಯಗಳಿಗೆ ಓಡಾಡುತ್ತಿದ್ದಾರೆ. ಇದರಿಂದ ನಗರಸಭೆಯ ಅಧ್ಯಕ್ಷರ ಹುದ್ದೆಯ ಗೌರವಕ್ಕೆ ದಕ್ಕೆ ಬರುವುದಲ್ಲದೇ ನಗರಸಭೆಯ ಮಾನ ಮೂರು ಕಾಸಿಗೆ ಹರಾಜು ಹಾಕಿದಂತಾಗಿದೆ. ಅಧ್ಯಕ್ಷರಿಗೆ ಕಾರು ಕೊಡಲಾಗದ ನಗರಸಭೆ ನಗರದ ಮೂಲ ಸೌಕರ್ಯ ಹೇಗೆ ಒದಗಿಸುತ್ತದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಕೋಟ್:

ನಗರಸಭೆಯಿಂದ ವಾಹನದ ಸೌಲಭ್ಯ ಒದಗಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಈವರೆಗೆ ಸರ್ಕಾರಿ ಕಾರು, ಚಾಲಕ ಹಾಗೂ ಡೀಸೆಲ್ ಖರ್ಚು ಒದಗಿಸದ ಹಿನ್ನೆಲೆಯಲ್ಲಿ ನನ್ನ ಸ್ವಂತ ಕಾರಿನಲ್ಲಿ ನಗರಸಭೆಯ ಕೆಲಸಗಳಿಗೆ ಓಡಾಡುತ್ತಿದ್ದೇನೆ.

- ಶಶಿಕಲಾ ರಾಮು ಮಾಳಗಿ, ಅಧ್ಯಕ್ಷೆ, ನಗರಸಭೆ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net