

ಹಾವೇರಿ: ಸ್ವಚ್ಛತೆ, ಪರಿಸರ ಹಾಗೂ ನಗರದ ಆರೋಗ್ಯವನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯವಾಗಿದೆ. ಪೌರ ಕಾರ್ಮಿಕರು ಇತರರಂತೆ ಮನುಷ್ಯರಾಗಿದ್ದು, ಅವರನ್ನು ಕೀಳಾಗಿ ಕಾಣದೇ ಗೌರವ ನೀಡಬೇಕಾದದ್ದು, ಎಲ್ಲರ ಜವಾಬ್ದಾರಿಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಹೇಳಿದರು.
ಪೌರಾಡಳಿತ ಇಲಾಖೆ ಹಾಗೂ ಹಾವೇರಿ ನಗರಸಭೆ ವತಿಯಿಂದ ಮಂಗಳವಾರ ನಗರದ ಸಿಂಧಗಿ ಶಾಂತವೀರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಗರಸಭೆ ಸದಸ್ಯರೊಂದಿಗೆ ಚರ್ಚಿಸಿ ಪೌರ ಕಾರ್ಮಿಕರಿಗೆ ಸಮುದಾಯ ಭವನ ನಿರ್ಮಾಣ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಂತ ಹಂತವಾಗಿ ಪೌರ ಕಾರ್ಮಿಕರನ್ನು ಖಾಯಂ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಪೌರ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಹಾಸ್ಟೆಲ್, ವಿದ್ಯಾಭ್ಯಾಸ ಕಿಟ್, ವಿದೇಶಿ ಶಿಕ್ಷಣಕ್ಕೆ 40 ಲಕ್ಷ ಪ್ರೋತ್ಸಾಹಧನ ಕೊಡುತ್ತಿದೆ. ಕೆಲವು ಪೌರ ಕಾರ್ಮಿಕರು ಕೆಲಸದಲ್ಲಿ ಮೈಗಳ್ಳತನ ತೋರುತ್ತಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ದಲಿತ ಸಂಘಟನೆಗಳ ಪ್ರಮುಖರಾದ ಉಡಚಪ್ಪ ಮಾಳಗಿ, ಸುಭಾಸ ಬೆಂಗಳೂರು ಮಾತನಾಡಿದರು. ನಗರ ಯೋಜನಾ ನಿರ್ದೇಶಕ ಚಂದ್ರಪ್ಪ, ಪೌರಾಯುಕ್ತ ಕಾಂತರಾಜು ಎಚ್., ಸಹಾಯಕ ಇಂಜನೀಯರ್ ಎಸ್.ಎಸ್.ಮತ್ತಿಕಟ್ಟಿ, ಸದಸ್ಯರಾದ ಶಿವಯೋಗಿ ಹುಲಿಕಂತಿಮಠ, ಪ್ರಸನ್ನ ಧಾರವಾಡಕರ್, ಪೀರಸಾಬ್ ಚೋಪದಾರ, ಚನ್ನಮ್ಮ ಬ್ಯಾಡಗಿ, ಪೂಜಾ ಹಿರೇಮಠ, ದೀಪಾ ಹೇರೂರ, ವಿಶಾಲಾಕ್ಷಿ ಆನವಟ್ಟಿ, ರೇಣುಕಾ ಪುತ್ರನ್, ರಜೀಯಾಬೇಗಂ ದೇವಿಹೊಸೂರ, ಚೈತ್ರಾ ಹತ್ತಿ, ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ, ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು. ಶೋಭಾ ಉದಗಟ್ಟಿ, ಮಧುಮತಿ ಸುಂಕಾಪುರ ನಿರೂಪಿಸಿದರು.
ಬೇಡಿಕೆ ಈಡೇರಿಸಿ
ಎಲ್ಲ ಪೌರ ಕಾರ್ಮಿಕರಿಗೆ ಮನೆ ಸೌಲಭ್ಯ ಒದಗಿಸಿ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರನ್ನು ನೇಮಿಸಿ, ನಗರದಲ್ಲಿ ಪೌರ ಕಾರ್ಮಿಕರಿಗೆ ಸಮುದಾಯ ಭವನ ನಿರ್ಮಿಸಿ, ಪೌರ ಕಾರ್ಮಿಕರಿಗೆ ಸಫಾಯಿ ಕರ್ಮಚಾರಿ ಎಂದು ಪ್ರಮಾಣ ಪತ್ರ ನೀಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.