ನಗರಸಭೆ ಕಂದಾಯ ಅಧಿಕಾರಿ ದುರ್ಗೇಶಿ ಕೆಲಸದಿಂದ ಬಿಡುಗಡೆ; ನಿರ್ಲಕ್ಷೃ ಸರಿಪಡಿಸಿಕೊಳ್ಳಲು ಎರಡು ತಿಂಗಳು ಕಾಲಾವಕಾಶ

7 HVR 7 New
Published on

ಹಾವೇರಿ: ಇಲ್ಲಿನ ನಗರಸಭೆ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದೆ. ನಗರಸಭೆ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ತರಾತುರಿಯಲ್ಲಿ ನಗರಸಭೆ ಪ್ರಗತಿ ಪರಿಶೀಲನಾ ಸಭೆ ಕರೆದಿದ್ದೇನೆ. 31 ವಾರ್ಡುಗಳ ಸದಸ್ಯರು ಯಾವುದೇ ಅಧಿಕಾರಿ, ಸಿಬ್ಬಂದಿ ಮೇಲೆ ದೂರುಗಳು ಇದ್ದರೆ ತಿಳಿಸಿ ಎಂದು ಮಾತು ಆರಂಭಿಸಿದ, ಸಚಿವರು ಒಂದೊಂದು ವಿಭಾಗದ ದೂರು ಆಲಿಸಿ, ಆಡಳಿತ ಯಂತ್ರಕ್ಕೆ ಸರ್ಜರಿ ನಡೆಸಲು ಯತ್ನಿಸಿದರು.

ಇಲ್ಲಿನ ನಗರಸಭೆ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಅವರು ಸದಸ್ಯರ ಅಹವಾಲುಗಳನ್ನು ಆಲಿಸಿದರು. ಕಂದಾಯ ಅಧಿಕಾರಿ ದುರ್ಗೇಶಿ ಅವರಿಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ. ಕಚೇರಿಯಲ್ಲಿ ಸಿಗಲ್ಲ. ಕಂದಾಯ ನಿರೀಕ್ಷಕರು ಸರಿಯಾಗಿ ಮಳಿಗೆಗಳ ಬಾಡಿಗೆ ವಸೂಲಿ ಮಾಡುವುದಿಲ್ಲ. 28, 11 ಸಾವಿರ ರೂ. ಹರಾಜು ಕರಾರಿನ ಬಾಡಿಗೆ ಇದ್ದಲ್ಲಿ ಕೇವಲ 4 ಸಾವಿರ, 800 ರೂ. ಮಾತ್ರ ಬಾಡಿಗೆ ವಸೂಲಿ ಮಾಡುತ್ತಾರೆ. ಐದಾರು ವರ್ಷಗಳಿಂದ ಮಳಿಗೆಗಳ ಹರಾಜು ಕರೆದಿಲ್ಲ ಎಂಬಿತ್ಯಾದಿ ದೂರುಗಳು ಕೇಳಿ ಬಂದವು.

ಕಂದಾಯ ಅಧಿಕಾರಿ ದುರ್ಗೇಶಿ ಸರಿಯಾದ ಉತ್ತರ ಕೊಡದ ಹಿನ್ನೆಲೆಯಲ್ಲಿ ಅವರನ್ನು ಇಂದೇ ಕೆಲಸದಿಂದ ಬಿಡುಗಡೆ ಮಾಡಿ. ಕಂದಾಯ ನಿರೀಕ್ಷಕಿ ಎಂ.ಎಚ್ ಸುಂಕಾಪುರ ಅವರಿಗೆ ಕಂದಾಯ ಅಧಿಕಾರಿ ಚಾರ್ಜ್ ಕೊಡಿ ಎಂದು ಸಚಿವರು ಆದೇಶಿಸಿದರು. ನಾಲ್ವರು ಕಂದಾಯ ನಿರೀಕ್ಷಕರು, ಆಸ್ತಿ ಕರ, ಮಳಿಗೆಗಳ ಕರ ವಸೂಲಿಯಲ್ಲಿ ವಂಚನೆ ಮಾಡಿರುವ ಕುರಿತು ಪರಿಶೀಲಿಸಿ ವರದಿ ಸಲ್ಲಿಸಿ. ಎರಡು ತಿಂಗಳ ಕಾಲ ಇವರ ಮೇಲೆ ನಿಗಾ ಇಡಿ ಎಂದು ಡಿಸಿ ಅವರಿಗೆ ಸೂಚಿಸಿದರು.

ನಗರಸಭೆಯ ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಯಾವಾಗ ಕೇಳಿದರೂ ಡಿಸಿ ಆಫೀಸ್ ಹೋಗಿರುವುದಾಗಿ ಹೇಳುತ್ತಾರೆ. ಖಾಯಂ ಪೌರಾಯುಕ್ತರು ಇಲ್ಲದ್ದರಿಂದ ಸಮಸ್ಯೆಯಾಗಿದೆ. ಒಂದು ವಾಲ್ವ್, ಪೈಪ್ ಕೇಳಿದರೆ ಇಲ್ಲ ಅಂತಾರೆ ಅಧಿಕಾರಿಗಳು. ಎಇಇ ರಾಯ್ಕರ, ಸಮೀರ್ ನೀರಿನ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ, ನಾಗೇಂದ್ರನಮಟ್ಟಿ ಕೆಳಸೇತುವೆ ಸಮಸ್ಯೆಗೆ ಮುಕ್ತಿ ನೀಡಿ, ಎಂಬಿತ್ಯಾದಿ ದೂರುಗಳು ಸದಸ್ಯರಿಂದ ಕೇಳಿಬಂದವು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸಿ ಎಚ್.ಬಿ ಚನ್ನಪ್ಪ, ಇತರರಿದ್ದರು.

ಮ್ಯಾನೇಜರ್ ಬಳಿ ಮಾಹಿತಿ ಇಲ್ಲ

ನಗರಸಭೆಯಲ್ಲಿ ಸರ್ಕಾರದಿಂದ ಮಂಜೂರಾದ ಹುದ್ದೆಗಳೆಷ್ಟು ? ಸದ್ಯ ಇರುವ ಹುದ್ದೆ ಎಷ್ಟು ? ನಾಲ್ವರು ಎಸ್‌ಡಿಎ ಗಳನ್ನು ಖಾಲಿ ಕೂರಿಸಿದ್ದು ಯಾಕೆ ? ಎಂದು ನಗರಸಭೆ ಮ್ಯಾನೇಜರ್ ತಿಪ್ಪೇಶಪ್ಪ ಹಾಗೂ ಇಎಸ್‌ಟಿ ಮಾಲತೇಶ ತಿಗಳಣ್ಣನವರಗೆ ಸಚಿವರು ಪ್ರಶ್ನಿಸಿದರು. ಇದಕ್ಕೆ ಅವರು ಸರಿಯಾದ ಉತ್ತರ ನೀಡದೇ ತಡಬಡಾಯಿಸಿದರು. ಬಳಿಕ ಡಿಸಿ ಅವರು 73 ಹುದ್ದೆ ಮಂಜೂರಾಗಿದ್ದು, 37 ಖಾಯಂ, 4 ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ ಎಂದರು. ನಿಮಗೆ ನಿಮ್ಮ ಕೆಲಸವೇ ಗೊತ್ತಿಲ್ಲ. ಕೆಲಸ ಮಾಡದ ಸಿಬ್ಬಂದಿ ಮೇಲೆ ನಿಯಂತ್ರಣವಿಲ್ಲ. ಯರೊಬ್ಬರಿಗೂ ನೋಟಿಸ್ ಕೊಟ್ಟಿಲ್ಲ ಯಾಕೆ. ಎರಡು ತಿಂಗಳು ಕಾಲಾವಕಾಶ ಕೊಡುವೆ. ಎಲ್ಲ ಸರಿಯಾಗಿ ನಿಭಾಯಿಸಿಕೊಂಡು ಹೋಗಿ ಎಂದು ಸೂಚಿಸಿದರು.

ನೀರಿನ ಸಮಸ್ಯೆ, ಪ್ರತ್ಯೇಕ ಸಭೆ

ಹಾವೇರಿ ನಗರದಲ್ಲಿ ನೀರಿನ ಸಮಸ್ಯೆ ಜೀವಂತವಾಗಿದೆ. 24/7 ಯೋಜನೆ ಪೂರ್ಣವಾಗಿಲ್ಲ. ಆದರೂ 33 ಕೋಟಿ ರೂ. ಬಿಲ್ ಜಾರಿ ಮಾಡಿದ್ದಾರೆ. ಇದಕ್ಕೆ ಕೆಯುಐಡಿಎಫ್‌ಸಿ ಸಂಪೂರ್ಣ ಹೊಣೆಯಾಗುತ್ತದೆ. ಇದಕ್ಕೆ ಕಾರಣರಾದ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಿ. ನಗರದ ನೀರಿನ ಸಮಸ್ಯೆ ಸರಿಪಡಿಸಿ ಎಂದು ಸದಸ್ಯ ಸಂಜೀವಕುಮಾರ ನೀರಲಗಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಶೀಘ್ರದಲ್ಲೇ ಜಲಮಂಡಳಿ ಹಾಗೂ ಕೆಯುಐಡಿಎಫ್‌ಸಿ ಜತೆಗೆ ಸಭೆ ನಡೆಸಿ ಈ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net