

ಹಾವೇರಿ: ನಗರದ ಗಾಂಧಿ ವೃತ್ತದ ಬಳಿ ಖಾಲಿ ಜಾಗೆಯಲ್ಲಿ ಇಲ್ಲಿನ ನಗರಸಭೆ ವತಿಯಿಂದ ನಿರ್ಮಿಸಲಾಗುತ್ತಿರುವ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಮೂಲ ನಕ್ಷೆಯಲ್ಲಿ ರಸ್ತೆಗಾಗಿ ಬಿಟ್ಟಿರುವ ಜಾಗದಲ್ಲಿ ನಗರಸಭೆಯಿಂದಲೇ ಅಕ್ರಮವಾಗಿ ಕಾಮಗಾರಿ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಜಾಗವನ್ನು ರಸ್ತೆಗಾಗಿ ಬಿಡಲಾಗಿದೆ. ಈ ಜಾಗದಲ್ಲಿ ಇದ್ದ ಕಟ್ಟಡವನ್ನು 12 ವರ್ಷಗಳ ಹಿಂದೆಯೇ ತೆರವುಗೊಳಿಸಲಾಗಿದೆ. ನಗರಸಭೆಗೆ ಸೇರಿದ್ದು ಎಂಬುದನ್ನು ಅವರ ಬಳಿ ಸೂಕ್ತ ದಾಖಲೆಗಳೇ ಇಲ್ಲ. ಕಂದಾಯ ವಿಭಾಗದಲ್ಲಿ ದಾಖಲಾಗಿರುವ ಯಾವುದೋ ದಾಖಲೆ ತೋರಿಸುತ್ತಿದ್ದಾರೆ. ಈ ಜಾಗಕ್ಕೆ ಇಸ್ವತ್ತು ಆಗಿಲ್ಲ. ಸಿಟಿ ಸರ್ವೆ ದಾಖಲೆ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಸೂಕ್ತ ದಾಖಲೆಗಳು ಇಲ್ಲದಿದ್ದರೂ ನಗರಸಭೆಯವರು ಅಕ್ರಮವಾಗಿ ಮಳಿಗೆ ನಿರ್ಮಿಸುತ್ತಿದ್ದಾರೆ. ಮೊದಲು ಅವರು ಸೂಕ್ತ ದಾಖಲೆ ಕೊಡಬೇಕು. ಅಲ್ಲಿಯವರೆಗೂ ಕಾಮಗಾರಿ ನಿಲ್ಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
26/25 ವಿಸ್ತೀರ್ಣದ ಈ ಜಾಗೆ ನಗರಸಭೆಗೆ ಸೇರಿದೆ. 2008-09ರಲ್ಲಿ ನಗರಸಭೆ ಕಂದಾಯ ವಿಭಾಗದಲ್ಲಿ ದಾಖಲಾಗಿದೆ. ಲಕ್ಷ್ಮಣ ಬಂಡಿವಡ್ಡರ ಎಂಬುವರಿಗೆ 19.48 ಲಕ್ಷ ರೂ.ಗೆ ಮಳಿಗೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ. ಎಲ್ಲವನ್ನೂ ಕಾನೂನು ಬದ್ಧವಾಗಿ ಮಾಡಲಾಗಿದೆ ಎಂದು ನಗರಸಭೆ ಎಇಇ ಎನ್.ಆರ್ ರಾಯ್ಕರ ತಿಳಿಸಿದ್ದಾರೆ.
ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ರಮೇಶ ಆನವಟ್ಟಿ, ಸ್ಥಳೀಯ ನಿವಾಸಿಗಳು ಮಳಿಗೆ ನಿರ್ಮಾಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಶಿಕಲಾ ಮಾಳಗಿ ತಿಳಿಸಿದರು.
ನೋಟಿಸ್ ಇಲ್ಲದೇ ಗೋಡೆ ತೆರವು
ಖಾಲಿ ಜಾಗದ ಪಕ್ಕದಲ್ಲಿರುವ ಬ್ಯಾಗ್ ಅಂಗಡಿಯ ಗೋಡೆಯನ್ನು ಯಾವುದೇ ನೋಟಿಸ್ ನೀಡದೇ ಒತ್ತುವರಿ ನೆಪದಲ್ಲಿ ಗುತ್ತಿಗೆದಾರರು ಒಡೆಸಿದ್ದಾರೆ. ಈ ಬಗ್ಗೆ ಎಇಇ ರಾಯ್ಕರ ಅವರನ್ನು ಕೇಳಿದರೆ, ಗೋಡೆ ಹೊಡೆಯಲು ನಾನು ಯಾರಿಗೂ ಹೇಳಿಲ್ಲ. ನಗರಸಭೆ ಸದಸ್ಯ ಸಚಿನ ಡಂಬಳ ಮತ್ತು ಗುತ್ತಿಗೆದಾರರೇ ಒಡೆಸಿದ್ದಾರೆ ಎನ್ನುತ್ತಾರೆ ಎಂದು ಅಂಗಡಿ ಮಾಲೀಕ ಚೇತನ ಚಂದ್ರಶೇಖರ ಕೋಡಿಹಳ್ಳಿ ಆರೋಪಿಸಿದ್ದಾರೆ.