

ಹಾವೇರಿ: ನಗರಸಭೆ ಸದಸ್ಯರ ಅವಧಿ ಅಕ್ಟೋಬರ್ 30ರಂದು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಸಾಮಾನ್ಯ ಸಭೆ, ಸದಸ್ಯರ ವಿರೋಧ ಹಾಗೂ ಗೋಜು- ಗದ್ದಲದ ನಡುವೆ ಅರ್ಧಕ್ಕೆ ಮೊಟಕುಗೊಂಡಿತು.
ಬೆಳಗ್ಗೆ 11 ಗಂಟೆಗೆ ವಿಶೇಷ ಸಾಧಾರಣ ಸಭೆ ಕರೆಯಲಾಗಿತ್ತು. ಅಧ್ಯಕ್ಷರು, ಪೌರಾಯುಕ್ತರು ಹಾಗೂ ಇಬ್ಬರು ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದರು. ಹಲವು ಸದಸ್ಯರು ಉಪಾಧ್ಯಕ್ಷರ ಕಚೇರಿಯಲ್ಲಿ ಸೇರಿದ್ದರು. 12 ಗಂಟೆಯಾದರೂ ಉಳಿದ ಸದಸ್ಯರು ಬರಲಿಲ್ಲ. ಇದರಿಂದ ಆಕ್ರೋಶಗೊಂಡ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಸಭಾಂಗಣದಿಂದ ಹೊರಟು ತಮ್ಮ ಕ್ಯಾಬಿನ್‌ಗೆ ತೆರಳಿದ್ದರು.
ಶಾಸಕ ರುದ್ರಪ್ಪ ಲಮಾಣಿ ಮಧ್ಯಾಹ್ನ 1.20ಕ್ಕೆ ನಗರಸಭೆಗೆ ಬಂದರು. ನಂತರ ಎಲ್ಲ ಸದಸ್ಯರು ಸಭೆಗೆ ಬಂದರು. ಮಧ್ಯಾಹ್ನ 1.30ಕ್ಕೆ ಸಭೆ ಆರಂಭವಾಯಿತು. ಆರಂಭದಲ್ಲೇ ಸದಸ್ಯ ಐ.ಯು.ಪಠಾಣ ಮಾತನಾಡಿ, ವಿಶೇಷ ಸಾಮಾನ್ಯ ಸಭೆಯಲ್ಲಿ ದೃಢೀಕರಣ ಚರ್ಚಿಸಲು ಅವಕಾಶವಿಲ್ಲ. ಸಾಮಾನ್ಯ ಸಭೆಯಲ್ಲಿ ಮಾತ್ರ ದೃಢೀಕರಣಕ್ಕೆ ಅವಕಾಶವಿದೆ. ಹಾಗಾಗಿ, ಈ ಸಭೆಯಲ್ಲಿ ಯಾವುದೇ ದೃಢೀಕರಣ ಬೇಡ ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶಶಿಕಲಾ ಮಾಳಗಿ, ಸುವ್ಯವಸ್ಥೆ ಕಾಪಾಡಲು ದೃಢೀಕರಣ ತೆಗೆದುಕೊಳ್ಳಲು ಅಧ್ಯಕ್ಷರಿಗೆ ಅವಕಾಶವಿದೆ ಎಂದರು.
ಮತ್ತೊಬ್ಬ ಸದಸ್ಯ ಗಣೇಶ ಬಿಷ್ಟಣ್ಣವರ ಮಾತನಾಡಿ, ನಾಳೆ ನಮ್ಮ ಅವಧಿ ಮುಗಿಯಲಿದೆ. ಈ ಸಭೆಯಲ್ಲಿ ಹಳೆಯ ಕೆಲಸಗಳ ದೃಢೀಕರಣ ಏಕೆ ಮಾಡುತ್ತೀರಿ. ಆಡಳಿತಾಧಿಕಾರಿ ಬಂದ ನಂತರ ಅವರಿಂದ ಮಾಡಿಕೊಳ್ಳಿ. ನನಗೆ ಅನಾರೋಗ್ಯ ಉಂಟಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೆ. ನನ್ನ 22 ವಾರ್ಡ್‌ಗೆ ನಗರೋತ್ಥಾನ ಯೋಜನೆಯಲ್ಲಿ ಅನುದಾನವನ್ನೇ ಕೊಟ್ಟಿಲ್ಲ. ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು. ಪ್ರತಿಯೊಂದು ವಾರ್ಡ್‌ಗೂ ತಲಾ 5 ಲಕ್ಷ ರೂ. ಕೊಟ್ಟಿದ್ದೇನೆ. ನೀವು ಯಾವುದಕ್ಕೆ ಅನುದಾನ ಬೇಕು ಎಂಬ ಪ್ರಸ್ತಾವನೆ ಸಲ್ಲಿಸದ ಕಾರಣ ನಿಮ್ಮ ವಾರ್ಡ್‌ಗೆ ಅನುದಾನ ಬಂದಿಲ್ಲ. ನಾನು ಎಂದಿಗೂ, ಯಾರಿಗೂ ತಾರತಮ್ಯ ಮಾಡಿಲ್ಲ ಎಂದು ಶಶಿಕಲಾ ಮಾಳಗಿ ದಾಖಲೆ ಸಮೇತ ಸ್ಪಷ್ಟಪಡಿಸಿದರು.
ದೃಢೀಕರಣ ಮಾಡಲು ಸಾಧ್ಯವಿಲ್ಲ. ಈಗ ಇಲ್ಲಿ ಒಪ್ಪಿಕೊಂಡು ನಾವು ಯಾರೂ ಜೈಲಿಗೆ ಹೋಗಲು ತಯಾರಿಲ್ಲ. ಸಭೆ ಮಾಡುವುದೇ ಆದರೆ, ಸ್ಥಳದಲ್ಲೇ ಕಂಪ್ಯೂಟರ್ ತರಿಸಿ, ಟೈಪ್ ಮಾಡಿಸಿ, ಸಹಿ ಮಾಡಿ ಪಾಸ್ ಮಾಡಿ. ಇಲ್ಲವೇ ಸಭೆ ಅನಧಿಕೃತ ಎಂದು ಘೋಷಿಸಿ ಎಂದು ಸದಸ್ಯ ಪಠಾಣ ಪಟ್ಟು ಹಿಡಿದರು.
ಅಧ್ಯಕ್ಷರ ಸಹಿ ಇಲ್ಲದೇ ಬಿಲ್ ತೆಗೆದಿದ್ದಾರೆ. ಇದನ್ನು ಒಬ್ಬ ಸದಸ್ಯರಾದರೂ ಪ್ರಶ್ನಿಸಿದ್ದೀರಾ. ಅಕೌಂಟ್ ಸೆಕ್ಷನ್ ಸಿಬ್ಬಂದಿ ಇಲ್ಲದೇ ಒಂದು ತಿಂಗಳಿಂದ ಬಂದ್ ಆಗಿದೆ. ಹೀಗಾದರೆ ನಗರಸಭೆ ಹೇಗೆ ನಡೆಯಬೇಕು ಎಂದು ಶಶಿಕಲಾ ಪ್ರಶ್ನಿಸಿದರು. ನನ್ನ ಅವಧಿಯಲ್ಲಿ ನಗರಸಭೆ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ ಶಾಸಕರು, ಸದಸ್ಯರು ಹಾಗೂ ಅಧಿಕಾರಿಗಳಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸಭೆಯಲ್ಲಿ ಪೌರಾಯುಕ್ತ ಎಚ್.ಕಾಂತರಾಜು, ಎಇಇ ಮಹೇಶ ಕಲಾಲ, ಜೆಇಇ ಮಹಮ್ಮದ್ ಸಮೀರ್, ಸದಸ್ಯರಾದ ಸಂಜೀವಕುಮಾರ ನೀರಲಗಿ, ಬಸವರಾಜ ಬೆಳವಡಿ, ಮುತ್ತುರಾಜ ಹುಲಿಕಂತಿಮಠ, ಚನ್ನಮ್ಮ ಬ್ಯಾಡಗಿ, ಇತರ ಸದಸ್ಯರು, ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.
ಕಾಮಗಾರಿ ಇಲ್ಲದೇ ಬಿಲ್ ಆರೋಪ
ವಿದ್ಯಾನಗರ ಸಿ ಬ್ಲಾಕ್ ಮೊದಲ ಕ್ರಾಸ್‌ನಲ್ಲಿ ಪೇವರ್ಸ್ ಹಾಕಲಾಗಿದೆ ಎಂದು ಫೋಟೋ ತೆಗೆಸಿ ಬಿಲ್ ಹಾಕಲಾಗಿದೆ. ಅಲ್ಲಿ ಕಾಮಗಾರಿಯನ್ನೇ ಮಾಡಿಲ್ಲ. ಈಗಲೇ ಬನ್ನಿ ತೋರಿಸುತ್ತೇನೆ ಎಂದು ಸದಸ್ಯ ಗಣೇಶ ಬಿಷ್ಟಣ್ಣವರ ಶಾಸಕರನ್ನು ಆಹ್ವಾನಿಸಿದರು. ಶಾಸಕರು ಮೂಕಪ್ರೇಕ್ಷಕರಾಗಿ ಎಲ್ಲವನ್ನೂ ಗಮನಿಸಿ, ಸುಮ್ಮನಾದರು.
ಉಪಾಧ್ಯಕ್ಷ ಗೈರು
ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಹಾಗೂ ಹಲವು ಸದಸ್ಯರು ಸಭೆ ಆರಂಭವಾಗುವ ವೇಳೆಗೆ ಉಪಾಧ್ಯಕ್ಷರ ಕ್ಯಾಬಿನ್‌ನಲ್ಲಿ ಇದ್ದರು. ಬಾಗಿಲು ಬಂದ್ ಮಾಡಿ ಒಳಗಿದ್ದರು. ಸಿಸಿಟಿವಿ ಕ್ಯಾಮರಾದಲ್ಲಿ ಏನೂ ಕಾಣದಂತೆ ಹಲವು ದಿನಗಳಿಂದ ಮೇಲಕ್ಕೆ ತಿರುಗಿಸಿದ್ದಾರೆ ಎಂದು ಶಶಿಕಲಾ ಮಾಳಗಿ ಆರೋಪಿಸಿದರು. ಶಾಸಕರು ಬಂದ ನಂತರ ಹಲವು ಸದಸ್ಯರು ಸಭೆಗೆ ಬಂದರೂ, ಉಪಾಧ್ಯಕ್ಷರು ಹಾಜರಾಗಲಿಲ್ಲ.