ಅಧಿಕಾರಿಗಳ ಬೇಜವಾಬ್ದಾರಿಗೆ ಶಾಸಕರ ಕಿಡಿ; ಕೆಲ ಸಿಬ್ಬಂದಿ ಕಾಟಕ್ಕೆ ಅಧಿಕಾರಿಗಳು ಯಾರೂ ನಿಲ್ಲುತ್ತಿಲ್ಲ; ಸಾಮಾನ್ಯ ಸಭೆಯಲ್ಲಿ ರುದ್ರಪ್ಪ ಲಮಾಣಿ ಆಕ್ರೋಶ

7 HVR 4 B
Published on

ಹಾವೇರಿ: ನಗರಸಭೆಗೆ ಸೇರಿದ ಜಲ ಶುದ್ದೀಕರಣ ಘಟಕದಲ್ಲಿ ಇದ್ದ ಗಿಡ-ಮರಗಳನ್ನು ತೆರವುಗೊಳಿಸಿದ ಬಳಿಕ ಹರಾಜು ಮಾಡಿ ಬಂದ ಹಣವನ್ನು ನಗರಸಭೆಗೆ ಜಮೆ ಮಾಡಿಸಿಕೊಳ್ಳದೇ ನಿರ್ಲಕ್ಷೃ ತೋರಿದ ಅಧಿಕಾರಿಗಳ ವಿರುದ್ಧ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಕಿಡಿಕಾರಿದರು. ಇದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತದೆ. ಹೀಗೆ ಆದರೆ, ನಗರಸಭೆ ಆಸ್ತಿ ಎಲ್ಲ ಮಾರಿಬಿಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ನಗರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ ನೀರು ಶುದ್ದೀಕರಣ ಘಟಕ ನಿರ್ಮಿಸಲು ಜಲಾಗಾರದಲ್ಲಿ ಜಲಮಂಡಳಿಗೆ ಜಾಗ ಹಸ್ತಾಂತರಿಸಲಾಗಿದೆ. ಅಲ್ಲಿದ್ದ ನಗರಸಭೆಯ ಗಿಡ-ಮರಗಳನ್ನು ಸದಸ್ಯರ ಗಮನಕ್ಕೆ ತರದೇ ತೆರವುಗೊಳಿಸಿದ್ದಾರೆ. ಇದರಿಂದ ನಗರಸಭೆಗೆ ಆದಾಯ ಕಡಿಮೆಯಾಗಿದೆ. ಜಲಾಗಾರದಿಂದ ನೀರು ತುಂಬಿಕೊಂಡು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸದಸ್ಯರಾದ ಐ.ಯು ಪಠಾಣ, ಗಿರೀಶ ತುಪ್ಪದ, ಚನ್ನಮ್ಮ ಬ್ಯಾಡಗಿ ಸಭೆಯ ಗಮನಕ್ಕೆ ತಂದರು.

ಶಾಸಕ ರುದ್ರಪ್ಪ ಮಾತನಾಡಿ, 25 ಗಿಡಗಳ ಹಸ್ತಾಂತರಕ್ಕೆ ಹೊಣೆ ಯಾರು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಬಗ್ಗೆ ತನಿಖೆ ಆಗಬೇಕು ಎಂದರು. 85 ಸಾವಿರ ರೂ.ಗೆ ಹರಾಜು ನಡೆದಿದೆ ಎಂದು ಇಂಜಿನಿಯರ್ ಸಮೀರ್ ವಿವರಿಸಿದರು. ಶಾಸಕರು ಅರಣ್ಯ ಇಲಾಖೆ ಅಧಿಕಾರಿಗೆ ಕರೆ ಮಾಡಿ ವಿಚಾರಿಸಿದರು. ಹರಾಜಿನ ಹಣ ನಗರಸಭೆಗೆ ಕೊಡಿ ಎಂದು ಯಾರೂ ತಿಳಿಸಲಿಲ್ಲ, ಹಾಗಾಗಿ ಸರ್ಕಾರಕ್ಕೆ ಜಮೆ ಮಾಡಿದ್ದೇವೆ ಎಂದು ಹೇಳಿದರು. ಸರ್ಕಾರಕ್ಕೆ ಹೋದ ಹಣ, ಸ್ಮಶಾನಕ್ಕೆ ಹೋದ ಹೆಣ ಎರಡೂ ವಾಪಸ್ ತರುವುದು ಕಷ್ಟ ಎಂದು ಶಾಸಕರು ಹೇಳಿದರು.

ಜಲಾಗಾರದ ಗುಜರಿ ಸಾಮಾನುಗಳನ್ನು ಯಾರ‌್ಯಾರೋ ಮಾರಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಲ್ಲಿ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಈ ನಗರಸಭೆಗೆ ಯಾವ ಅಧಿಕಾರಿಗಳೂ ಬರುವುದಿಲ್ಲ. ಬಂದವರು ನಿಲ್ಲುವುದಿಲ್ಲ. ನಿಂತರೂ ಇವರು ನಮ್ಮನ್ನೇ ಮಾರುತ್ತಾರೆ ಎಂದು ಓಡಿ ಹೋಗುತ್ತಾರೆ. ಹೀಗಾಗಿ ಹಳೆಯ ಗುಜರಿ ಸಾಮಾನುಗಳ ಮಾರಾಟದ ಬಗ್ಗೆ ಸಮಿತಿ ರಚಿಸಿ, ತನಿಖೆ ಮಾಡಿಸಿ ನಾಲ್ಕು ಮಂದಿ ಅಮಾನತು ಮಾಡಿಸಿದರೆ ಬಿಸಿಮುಟ್ಟುತ್ತದೆ ಎಂದು ಕಿಡಿಕಾರಿದರು.

ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಪರವಾನಿಗೆ ಕೊಡಬೇಡಿ. ಯಾರು ಎಷ್ಟೇ ಒತ್ತಡ ಹಾಕಿದ್ದರೂ ಅನುಮತಿ ಕೊಡಬೇಡಿ ಎಂದು ಶಾಸಕರು ಸೂಚಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪ್ರಭಾರ ಪೌರಾಯುಕ್ತ ಸುರೇಶ ಕಂಬಳಿ, ನಗರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ಸಂಜೀವ ನೀರಲಗಿ ಧರಣಿ

15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿದ್ದ ಅನುದಾನವನ್ನು ರಸ್ತೆಗುಂಡಿ ದುರಸ್ಥಿಗೆ ಬಳಸುವ ಕುರಿತು ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ, ಈ ಹಣದಲ್ಲಿ ಪ್ರತಿವಾರ್ಡ್ ಅಭಿವೃದ್ಧಿಗೆ 5 ಲಕ್ಷ ರೂ. ಹಂಚಿಕೆ ಮಾಡಿದ್ದೀರಿ. ನನ್ನ ಗಮನಕ್ಕೆ ತರದೆ ನನ್ನ ವಾರ್ಡ್‌ನ ಕಿತ್ತೂರರಾಣಿ ಚನ್ನಮ್ಮ ಪಾರ್ಕಿನ ಬೋರ್‌ವೆಲ್ ದುರಸ್ಥಿಗೆ 3.25 ಲಕ್ಷ ಅನುದಾನ ಕೊಟ್ಟಿದ್ದೀರಿ ಆಕ್ರೋಶ ವ್ಯಕ್ತಪಡಿಸಿ ಸಂಜೀವಕುಮಾರ ನೀರಲಗಿ ಧರಣಿಗೆ ಮುಂದಾದರು. ಶಾಸಕ ರುದ್ರಪ್ಪ ಲಮಾಣಿ ಸಮಾಧಾನಪಡಿಸಿದರು. ಅಧ್ಯಕ್ಷೆ ಶಶಿಕಲಾ ಮಾಳಗಿ ಅವರು ಎಮರ್ಜೆನ್ಸಿ ಕೆಲಸದ ಅವಶ್ಯಕತೆ ಎಲ್ಲಿದೆಯೋ ಅಲ್ಲಿ ಅಭಿವೃದ್ಧಿ ಹಿತದೃಷ್ಟಿಯಿಂದ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಬ್ಯಾರೇಜ್ ನಿರ್ಮಾಣಕ್ಕೆ 50 ಕೋಟಿ

ಕಂಚಾರಗಟ್ಟಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣಕ್ಕೆ 150 ಕೋಟಿ ರೂ. ಅನುದಾನ ಕೇಳಿದ್ದೆ. ಮೊದಲ ಕಂತಿನಲ್ಲಿ 50 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಡಿಪಿಎಆರ್ ಸಿದ್ಧಪಡಿಸಲಿದ್ದಾರೆ. ಈ ಕಾಮಗಾರಿ ನಿರ್ಮಾಣವಾದರೆ ಹಾವೇರಿ ನಗರಕ್ಕೆ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ರುದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಗ್ಯಾಸ್‌ಪೈಪ್‌ಲೈನ್ ಹಣ ವಸೂಲಿ ಮಾಡಿ

ಎಜಿಪಿ ಗ್ಯಾಸ್ ಕಂಪನಿಯವರು ನಗರದಲ್ಲಿ 53 ಕಿ.ಮೀ. ಪೈಪ್‌ಲೈನ್ ಅಳವಡಿಸಲು 2022ರಂದು ಅನುಮತಿ ಪಡೆದಿದ್ದಾರೆ. ಆದರೆ, ಈವರೆಗೆ 99.36 ಲಕ್ಷ ರೂ. ಮಾತ್ರ ರಸ್ತೆ ಡ್ಯಾಮೇಜ್ ವೆಚ್ಚ ಭರಣ ಮಾಡಿದ್ದಾರೆ. ಅರ್ಧ, ಒಂದು ಇಂಚು ಪೈಪ್ ಅಳವಡಿಸುವುದಾಗಿ ಹೇಳಿ ಏಳೆಂಟು ಇಂಚಿನ ಪೈಪ್ ಅಳವಡಿಸುತ್ತಿದ್ದಾರೆ. ರಸ್ತೆ ಹಾಳು ಮಾಡು ದುರಸ್ಥಿ ಮಾಡದೇ ಬಿಟ್ಟಿದ್ದಾರೆ. ಎಲ್ಲೆಲ್ಲಿ ಅನುಮತಿ ಇದೆ ಎಂದು ಕೇಳಿದರೆ ನಮ್ಮ ಮೇಲೆಯೇ ಹಲ್ಲೆಗೆ ಮುಂದಾಗುತ್ತಾರೆ. ರಾತ್ರೋರಾತ್ರಿ ಕಾಮಗಾರಿ ನಡೆಸುತ್ತಾರೆ. ಕಾನೂನು ಬದ್ಧವಾಗಿ ಕಂಪನಿಯಿಂದ ನಗರಸಭೆಗೆ ಕೋಟ್ಯಂತರ ರೂ. ಬರಬೇಕಿದೆ. ಈ ಕುರಿತು ಅಧಿಕಾರಿಗಳು ಗಮನಹರಿಸಿ ಬಾಕಿ ವಸೂಲಿ ಮಾಡಲಿ ಎಂದು ಸದಸ್ಯರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net