

ಹಾವೇರಿ: ಜಿಲ್ಲಾ ಕೇಂದ್ರವಾಗಿರುವ ಹಾವೇರಿ ನಗರದಲ್ಲಿ ಅನಧಿಕೃತ ಬಡಾವಣೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೇವರು ಬಂದರೂ ನಗರದ ಪರಿಸ್ಥಿತಿ ಸುಧಾರಿಸಲು ಆಗಲ್ಲ, ಹೀಗಾಗಿ ಯಾರೇ ಅನಧಿಕೃತ ಬಡಾವಣೆ ನಿರ್ಮಿಸಿದರೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಶಾಸಕ, ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟರು.
ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಹಾವೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಪಾರ್ಕ್, ಸುಸಜ್ಜಿತ ರಸ್ತೆ, ಚರಂಡಿಗಳಿಲ್ಲದೇ ಬಡಾವಣೆ ನಿರ್ಮಿಸಲಾಗುತ್ತಿದೆ. ಅಕ್ರಮ ಬಡಾವಣೆಗಳಿಗೆ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ, ಎಷ್ಟೇ ಪ್ರಭಾವಿಗಳಿದ್ದರೂ ಅನಧಿಕೃತ ಬಡಾವಣೆಗೆ ಅವಕಾಶ ಕೊಡಬೇಡಿ. ಕಾನೂನು ಬದ್ಧವಾಗಿ ಬಡಾವಣೆ ನಿರ್ಮಿಸಲು ಸೂಚಿಸಿ ಎಂದು ಆದೇಶಿಸಿದರು.
ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ನಗರದಲ್ಲಿ ಹೊಸ ಬಡಾವಣೆ ನಿರ್ಮಿಸುವಾಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ಬಡಾವಣೆ ತಲೆ ಎತ್ತದಂತೆ ನೋಡಿಕೊಳ್ಳಬೇಕು. ತೆರಿಗೆ ವಸೂಲಿ ಬಗ್ಗೆ ವಿಶೇಷ ಅಭಿಯಾನ ನಡೆಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಬಸವರಾಜ ಬೆಳವಡಿ ಮಾತನಾಡಿ, ನಗರದಲ್ಲಿ ಸೈಟ್‌ಗಳ ಬೆಲೆ ದುಬಾರಿಯಾಗಿದೆ. ಆದರೆ, ಹೊಸ ಬಡಾವಣೆಗಳಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ. ಅಲ್ಲಿನ ರಸ್ತೆಗಳು, ಚರಂಡಿಗಳು ಒಂದೇ ವರ್ಷದಲ್ಲಿ ಕಿತ್ತು ಹೋಗುತ್ತಿವೆ. ಆಗ ಅಲ್ಲಿನ ನಿವಾಸಿಗಳು ನಗರಸಭೆಗೆ ಬಂದು ಪ್ರತಿಭಟಿಸುತ್ತಾರೆ. ಹೀಗಾಗಿ ಗುಣಮಟ್ಟದ ಕಾಮಗಾರಿ ಆಗುವಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದರು.
ಆಗ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ನಗರಸಭೆ ಸದಸ್ಯರೇ ತಮ್ಮ ವಾರ್ಡ್‌ಗಳಲ್ಲಿ ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ನೋಡಿಕೊಳ್ಳಿ. ಹೊಸ ಬಡಾವಣೆಗಳಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮಾತನಾಡಿ, ಬೀದಿ ನಾಯಿಗಳಿಗೆ ಚರ್ಮರೋಗ ಬರುತ್ತಿದೆ. ಹೀಗಾಗಿ ಬೀದಿ ನಾಯಿಗಳನ್ನು ಹಿಡಿಯುವಂತೆ ಸಾಕಷ್ಟು ಒತ್ತಡವಿದೆ. ನಾಯಿಗಳನ್ನು ಹಿಡಿಯಲು, ಶೆಡ್ ನಿರ್ಮಿಸಲು ಟೆಂಡರ್ ಕರೆಯಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನಗರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸಿ.ಚನ್ನಪ್ಪ ನಿರ್ವಹಿಸಿದರು.
ನಿವೇಶನದಲ್ಲಿ ಗೋಲ್ಮಾಲ್ ಆರೋಪ :
ದಾನೇಶ್ವರಿ ನಗರದ ಸಿಟಿಎಸ್ ನಂ. 3317/ಬಿ/36 ಕ್ಷೇತ್ರ 891.21 ಚ.ಮೀ ನಿವೇಶನವನ್ನು ಆಡಳಿತ ಮಂಡಳಿ ಇಲ್ಲದ ಸಮಯದಲ್ಲಿ ಅಧಿಕಾರಿಗಳೇ ನಿರ್ಣಯಿಸಿ ರಾಣಾ ಪ್ರತಾಪ ಅಸೋಸಿಯೇಶನ್‌ನವರಿಗೆ ನೀಡಿದ್ದಾರೆ. ಅದರಲ್ಲಿ ಸಾಕಷ್ಟು ಗೋಲ್‌ಮಾಲ್ ಆಗಿದೆ. ಅದು ಸಂಘ ಸಂಸ್ಥೆಗೆ ಹೋಗಿಲ್ಲ, ಒಂದು ಕುಟುಂಬಕ್ಕೆ ಹೋಗಿದೆ. ಈಗ ಅದರ ಬೆಲೆ ಅಂದಾಜು 10 ಕೋಟಿ ಇದೆ. ಹೀಗಾಗಿ, ಈ ನಿವೇಶನವನ್ನು ನಗರಸಭೆಗೆ ವಾಪಸ್ ಪಡೆಯಬೇಕು ಎಂದು ಸದಸ್ಯ ಸಚಿನ ಡಂಬಳ ಆಗ್ರಹಿಸಿದರು. ಆಗ ನಿವೇಶನ ವಾಪಸ್ ಪಡೆಯಲು ನಿರ್ಣಯಿಸಲಾಯಿತು.
ರೊಕ್ಕ ತಿಂದದ್ದು ತೋರಿಸಿ ರಾಜೀನಾಮೆ ಕೊಡ್ತೀನಿ
ಈ ಹಿಂದೆ ಅಕ್ಕಮಹಾದೇವಿ ಹೊಂಡಕ್ಕೆ ಹಾಕಿದ್ದ ಅನುದಾನ ಎಲ್ಲಿ ಹೋಗಿದೆ ಎಂದು ಸದಸ್ಯ ಲಾಲಸಾಬ ಚೋಪದಾರ ಪ್ರಶ್ನಿಸಿದರು. ಇದಕ್ಕೆ ಕೆರಳಿದ ಶಾಸಕ ರುದ್ರಪ್ಪ ಲಮಾಣಿ, ಅಕ್ಕಮಹಾದೇವಿ ಹೊಂಡಕ್ಕೆ ಹಾಕಿದ ಹಣ ತಿಂದಾರ, ತಿಂದಾರ ಅಂತಾ ಬೊಬ್ಬೆ ಹಾಕುತ್ತಾರೆ. ನಾನು ಒಂದು ರೂಪಾಯಿ ತಿಂದದ್ದು ತೋರಿಸಿ ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ ಎಂದು ಗರಂ ಆದರು. ಆಗ ಅರ್ಧ ಕೆಲಸ ಆಗಿದೆ. ಫುಟ್‌ಪಾತ್, ಕಾರಂಜಿ ಆಗಿತ್ತು. ಮುಂದೆ ಬಂದವರು ನೋಡಲಿಲ್ಲ, ಈಗಲಾದರೂ ಅದಕ್ಕೆ ಹೊಸ ಕಾಯಕಲ್ಪ ಕೊಟ್ಟು, ಕೆಲಸ ಪೂರ್ಣ ಮಾಡೋಣ ಎಂದರು.
ಫೈಲ್ ಬರಲೇ ಇಲ್ಲ...
ನಗರಸಭೆಯಿಂದ ತಲಾ ಒಂದು ಘಟಕಕ್ಕೆ 4.25ಲಕ್ಷ ರೂ., ವೆಚ್ಚದಲ್ಲಿ 6 ಘಟಕಗಳನ್ನು ಸ್ಥಾಪಿಸಿ 10 ವರ್ಷದ ಅವಧಿಗೆ ಲೀಸ್‌ಗೆ ನೀಡಲಾಗಿತ್ತು. ಆದರೆ, ಈವರೆಗೂ ಸರಿಯಾಗಿ ನಿರ್ವಹಣೆ ಮಾಡಿಲ್ಲ ಹಾಗಾಗಿ ಹಾಳಾಗಿವೆ. ಇದಕ್ಕೆ ಸಂಬಂಧಿಸಿರುವ ಫೈಲ್ ತರುವಂತೆ ಕಿರಿಯ ಇಂಜಿನಿಯರ್‌ಗೆ ಸಂಜೀವಕುಮಾರ ನೀರಲಗಿ ಸೂಚಿಸಿದರು. ಆಗ ಸದಸ್ಯರು ಫೈಲ್ ಬಂದ ಮೇಲೆ ಚರ್ಚಿಸೋಣ ಎಂದರು. ಆದರೆ, ಸಭೆ ಮುಗಿದರೂ ಫೈಲ್ ಬರಲೇ ಇಲ್ಲ.
ನಗರ ನಿರ್ಲಕ್ಷಿೃಸಿದ ಎಇಇ
ನಗರಸಭೆಯ ಎಇಇ ಎನ್.ಬಿ.ರಾಯ್ಕರ ನಗರದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಹೇಳಿದ ಯಾವುದೇ ಕೆಲಸ ಮಾಡುವುದಿಲ್ಲ. ಕೆರೆಗಳ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ ಎಂದು ಸದಸ್ಯ ಸಂಜೀವಕುಮಾರ ನೀರಲಗಿ ಆರೋಪಿಸಿದರು.