ಏಜೆಂಟರು ಕೊಟ್ಟರೆ ಮಾತ್ರ ಈ ಸ್ವತ್ತು; ಏಜೆಂಟರಿಗೆ ಇರುವ ಬೆಲೆ ಸದಸ್ಯರಿಗೆ ಇಲ್ಲ; ಹಾವೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಾರ್ಪೋರೇಟರ್ ಆಕ್ರೋಶ

15 HVR 2
Published on

ಹಾವೇರಿ: ನಗರಸಭೆ ವ್ಯಾಪ್ತಿಯ ಆಸ್ತಿಗಳಿಗೆ ಈ ಸ್ವತ್ತು ಅರ್ಜಿ ಸಲ್ಲಿಸಿದ ನಾಲ್ಕು ತಿಂಗಳಾದರೂ ಈ ಸ್ವತ್ತು ಸಿಗುತ್ತಿಲ್ಲ. ಏಜೆಂಟರ ಮೂಲಕ ಕೊಟ್ಟರೆ ಮಾಡುತ್ತಾರೆ. ನಗರಸಭೆ ಸದಸ್ಯರಿಗೂ ಕಿಮ್ಮಿತ್ತಿಲ್ಲ. ಹಾಗಾದರೆ ನಾವೂ ಏಜೆಂಟರಾಗಿ ಬರಬೇಕಾ ? ಎಂದು ಕಾರ್ಪೋರೇಟರ್ ಪೀರಸಾಬ ಚೋಪದಾರ ನಗರಸಭೆ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಈ ಸ್ವತ್ತಿನ ಸಮಸ್ಯೆಗಳ ಕುರಿತು ಗಮನ ಸೆಳೆದರು. ನಾವೇ ಅರ್ಜಿ ಸಲ್ಲಿಸಿದರೂ ನಾಲ್ಕೂದು ತಿಂಗಳಾದರೂ ಈ ಸ್ವತ್ತು ಸಿಗುತ್ತಿಲ್ಲ. ಏಜೆಂಟರಿಂದ ಬಂದರೆ ಬೇಗ ಕೊಡುತ್ತಾರೆ. ಹಾಗಾದರೆ, ಸದಸ್ಯರಿಗೆ, ಸಾರ್ವಜನಿಕರಿಗೆ ಗೌರವ ಇಲ್ಲವೇ ? ಎಂದು ಚೋಪದಾರ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತ ಗಂಗಾಧರ ಬೆಲ್ಲದ, ನಗರಸಭೆಯಲ್ಲಿ ಆಸ್ತಿ ತೆರಿಗೆ ಭರ್ತಿ ಮಾಡಿಕೊಂಡಿರುವ ದಾಖಲೆಗಳು ಸರಿಯಾಗಿ ಸಿಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಆನ್‌ಲೈನ್‌ನಲ್ಲಿ ಎಂಟ್ರಿಯಾಗಿಲ್ಲ. ಡಿಮ್ಯಾಂಕ್ ಪುಸ್ತಕದಲ್ಲಿ ಎಂಟ್ರಿಯಾಗುತ್ತಿಲ್ಲ. 8, 10 ವರ್ಷಗಳಿಂದ ಆಸ್ತಿ ತೆರಿಗೆ ಕಟ್ಟದವರು, ಕಳೆದ ವರ್ಷದ ತೆರಿಗೆ ಕಟ್ಟಿ ಸುಮ್ಮನಾಗುತ್ತಿದ್ದಾರೆ. ಇದರಿಂದ ನಗರಸಭೆ ಆದಾಯವೂ ಕಡಿಮೆಯಾಗುತ್ತಿದೆ. ಅಂಥವರ ಈ ಸ್ವತ್ತು ಸಿಗುತ್ತಿಲ್ಲ. ಉಳಿದವರಿಗೆ ಸಿಗುತ್ತಿದೆ. ಬಾಕಿ ತೆರಿಗೆ ಕಟ್ಟುವಂತೆ ಸೂಚಿಸಲಾಗುತ್ತಿದೆ. ಇನ್ನುಮುಂದೆ ಕಡ್ಡಾಯವಾಗಿ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕವೇ ದಾಖಲಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದ್ದೇನೆ ಎಂದು ವಿವರಿಸಿದರು.

ನಗರಸಭೆ ಕಸದ ವಾಹನಗಳು ಬಿಸಿಲಿನಲ್ಲಿ ನಿಲ್ಲುತ್ತವೆ. ಶೆಡ್ ನಿರ್ಮಿಸಲು 25 ಲಕ್ಷ, ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಲು 40 ಲಕ್ಷ ಬೇಕಾಗುತ್ತದೆ. ವಾಹನಗಳಿಗೆ ಜಿಪಿಎಸ್ ಮಾಡಲು 3 ಲಕ್ಷ ಬೇಕಾಗುತ್ತದೆ ಎಂದು ಪ್ರಭಾರಿ ಎಇಇ ರೇಣುಕಾ ವಿವರಿಸಿದರು. ಶೆಡ್ ನಿರ್ಮಿಸುವ ಮೊದಲು ಮೊದಲು ಕಸದ ಗಾಡಿ ಕಡಿಮೆ ಇದ್ದು, ಹೊ ವಾಹನ ಖರೀದಿಸಿ ಎಂದು ಸಚಿನ ಡಂಬಳ ಹೇಳಿದರು.

ಎಸ್‌ಎಫ್‌ಸಿ ಅನುದಾನ 28 ಲಕ್ಷ ರೂ. ಅನುದಾನ ಮಂಜೂರಾಗಿದೆ. ಪೌರ ಕಾರ್ಮಿಕರ ವೇತನ ಬಿಟ್ಟು 18 ಲಕ್ಷ ಕಾಮಗಾರಿಗೆ ಕೊಟ್ಟಿದ್ದಾರೆ. ಶೇ.5ರಷ್ಟು ವಿಕಲಚೇತನರಿಗೆ ಸೇರಿ ಇತರ ಕಾಮಗಾರಿಗೆ ಬಳಸಲಾಗುವುದು ಎಂದರು. ಎಸ್‌ಟಿಪಿಎಸ್ ಅನುದಾನದಲ್ಲಿ ಪೌರ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ಒದಗಿಸಿ ಎಂದು ಸದಸ್ಯರು ಸಲಹೆ ನೀಡಿದರು.

1.18 ಕೋಟಿ ರೂ. ಕುಡಿಯುವ ನೀರು ಸರಬರಾಜಿಗಾಗಿ ಅನುದಾನ ಬಂದಿದೆ. ಇದರಲ್ಲಿ ಹೆಗ್ಗೇರಿ ಎಸ್‌ಟಿಪಿ ಘಟಕಕ್ಕೆ ಅನುದಾನ ಕೊಡುವುದು ಬೇಡ ಎಂದರು ಕೆಲ ಸದಸ್ಯರು. ಕಂಚಾರಗಟ್ಟಿ ಬಳಿ ಪದೇಪದೆ ಪೈಪ್‌ಲೈನ್ ದುರಸ್ತಿ ಬದಲು ಹೊಸ ಪೈಪ್‌ಲೈನ್ ಅಳವಡಿಸಿ ಎಂದರು.

ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪೌರಾಯುಕ್ತ ಗಂಗಾಧರ ಬೆಲ್ಲದ, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಜಲಾಗಾರ ಜಾಗ ಹಸ್ತಾಂತರ, ಸಮೀರ್ ತರಾಟೆಗೆ

ಇಲ್ಲಿನ ಜಲಾಗಾರದಲ್ಲಿ 30ಕ್ಕೂ ಅಧಿಕ ಹಳೆಯ ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಯಾರು ಅನುಮತಿ ಕೊಟ್ಟರು ಎಂದು ಸದಸ್ಯ ಐ.ಯು ಪಠಾಣ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಜೂನಿಯರ್ ಇಂಜಿನಿಯರ್ ಮೊಹಮ್ಮದ್ ಸಮೀರ್ ಎಸ್., ಜಲಮಂಡಳಿಯಿಂದ ಹೊಸದಾಗಿ ಅಮೃತ 2.0 ಯೋಜನೆಯಡಿ ಜಲಶುದ್ದೀಕರಣ ಘಟಕ (ಡಬ್ಲುಟಿಪಿ) ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 26,900 ಚದರಡಿ ಜಾಗವನ್ನು ಕಳೆದ ವರ್ಷವೇ ಪೌರಾಯುಕ್ತರು ಹಸ್ತಾಂತರಿಸಿದ್ದಾರೆ. ಅವರೇ ಅರಣ್ಯ ಇಲಾಖೆ ಅನುಮತಿ ಪಡೆದು ಮರ ಕಡಿಸುತ್ತಿದ್ದಾರೆ ಎಂದರು. ಇದಕ್ಕೆ ಆಕ್ರೋಶಗೊಂಡ ಪಠಾಣ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಗರಸಭೆಯ ಗಮನಕ್ಕೂ ತರದೇ ಅದ್ಹೇಗೆ ಜಾಗ ಹಸ್ತಾಂತರಿಸಿದ್ದೀರಿ ? ಎಂದು ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಈ ಹಿಂದೆ ನಾನು ಇದನ್ನು ಕೇಳಿದರೆ ಸಮೀರ್ ಸಮರ್ಪಕ ಉತ್ತರ ಕೊಡಲಿಲ್ಲ. ಇದು ನಗರಸಭೆ ಆಸ್ತಿ. ನಿಮಗೂ ಸಂಬಂಧಪಡುತ್ತದೆ. ಹೊಸಮನಿ ಸಿದ್ದಪ್ಪ ಅವರು ಮಾಡಿದ ಆಸ್ತಿ. ಯಾಕೆ ಹೀಗೆ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ಇದಕ್ಕೆ ಸ್ಪಷ್ಟನೆ ಕೊಡಿ. ಮರಗಳ ಹಣವನ್ನು ನಗರಸಭೆಗೆ ಸಂದಾಯ ಮಾಡಿಸಿ ಎಂದು ಸೂಚಿಸಿದರು. ಲೋಪ ಒಪ್ಪಿಕೊಂಡ ಆಯುಕ್ತರು 15 ದಿನದೊಳಗೆ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net