

ಹಾವೇರಿ: ಜಿಲ್ಲಾ ಕೇಂದ್ರವಾಗಿ 26 ವರ್ಷ ಕಳೆದರೂ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಹೊಂದದೇ ಹಾವೇರಿ ನಗರ ಸೊರಗುತ್ತಿದೆ. ಇಲ್ಲಿನ ಜನ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಇನ್ನಾದರೂ ವಿಶೇಷ ಯೋಜನೆಗಳನ್ನು ರೂಪಿಸಿ ನಗರದ ಸಂಕಷ್ಟದಿಂದ ಪಾರು ಮಾಡಿ ಎಂದು ಹಾವೇರಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹಲವು ಸದಸ್ಯರು 5ನೇ ಹಣಕಾಸು ಆಯೋಗದ ಅಧ್ಯಕ್ಷರಲ್ಲಿ ಒಕ್ಕೊರಲ ಮನವಿ ಮಾಡಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಹಾವೇರಿ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಜತೆ ಸಂವಾದ ಸಭೆಯಲ್ಲಿ ಹಲವು ನಗರಸಭೆ ಸದಸ್ಯರಿಂದ ಕೇಳಿ ಬಂದ ಅಹವಾಲುಗಳಿವೆ.
ರಾಣೆಬೆನ್ನೂರ ನಗರಕ್ಕೆ ಹೋಲಿಸಿದರೆ ಜಿಲ್ಲಾ ಕೇಂದ್ರ ಹಾವೇರಿ ನಗರ ತೀರಾ ಹಿಂದುಳಿದಿದೆ. ಹಾವೇರಿ ನಗರದ ಅಭಿವೃದ್ಧಿ ವಿಚಾರದಲ್ಲಿ ಅಗತ್ಯವಾದ ವಿಶೇಷ ಅನುದಾನ ನೀಡುವ ಕುರಿತು ವಿಶೇಷ ಮುತುವರ್ಜಿ ವಹಿಸುವಂತೆ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಒತ್ತಾಯಿಸಿದರು.
ಹಾವೇರಿ 1998ರಲ್ಲಿ ಜಿಲ್ಲೆಯಾಗಿ ರೂಪುಗೊಂಡಿತು. ಇದರೊಂದಿಗೆ ಜಿಲ್ಲೆಯಾದ 7 ಜಿಲ್ಲೆಗಳು ಸುಧಾರಿಸಿಕೊಂಡಿವೆ. ಆದರೆ, ಹಾವೇರಿ ಮಾತ್ರ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಜಿಲ್ಲಾ ಕೇಂದ್ರದ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಇಲ್ಲಿಗೆ ಬರಬೇಕಾದ ಅನುದಾನ ಸರಿಯಾಗಿ ಬರುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಕೊಡಿ ಎಂದು ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಮನವಿ ಮಾಡಿದರು.
ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಎಸ್.ಎಸ್ ಮತ್ತಿಕಟ್ಟಿ, ನಗರಸಭೆ ಪೌರಾಯುಕ್ತ ಗಂಗಾಧರ ಬೆಲ್ಲದ, ಹಣಕಾಸು ಆಯೋಗದ ಸದಸ್ಯರು, ಇತರರು ಉಪಸ್ಥಿತರಿದ್ದರು.
ಹಾವೇರಿಗೆ ಬರಲು ಜನ ಹಿಂದೇಟು
ನಗರದ ಹೊರವಲಯದಲ್ಲಿ 800 ಎಕರೆ ವಿಸ್ತೀರ್ಣದ ಬೃಹತ್ ಹೆಗ್ಗೇರಿ ಕೆರೆ ಇದೆ. ತಾಲೂಕಿನಲ್ಲಿ ತುಂಗಭದ್ರ ಹಾಗೂ ವರದಾ ಎರಡು ನದಿಗಳು ಹರಿದಿವೆ. ಆದರೂ ಹಾವೇರಿ ಶಹರ ಸೇರಿ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಆಗುತ್ತಿಲ್ಲ. ಇದಕ್ಕೆ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು. ಹಾವೇರಿ ಶಹರ ನೀರು, ಚರಂಡಿ, ಒಳಚರಂಡಿ, ರಸ್ತೆ, ಇತರ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಇದರಿಂದ ಹಾವೇರಿಗೆ ಬರಲು ಹೊರಗಿನ ಜನ ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಜರುಗಿಸಿ ಎಂದು ಸದಸ್ಯರಾದ ಶಿವಯೋಗಿ ಹುಲಿಕಂತಿಮಠ, ಐ.ಯು ಪಠಾಣ ಹಾಗೂ ಇತರ ಸದಸ್ಯರು ಕೋರಿಕೊಂಡರು.
ಹಲವು ಸದಸ್ಯರು ಗೈರು
ಸಂವಾದ ಸಭೆಗೆ ಹಲವು ಸದಸ್ಯರು ಗೈರಾಗಿದ್ದರಿಂದ, ಸದಸ್ಯರ ಗ್ಯಾಲರಿ ಖಾಲಿ ಖಾಲಿಯಾಗಿ ಕಾಣುತ್ತಿತ್ತು. ಸದಸ್ಯರ ಕುರ್ಚಿಗಳಲ್ಲಿ ಅಧಿಕಾರಿಗಳು ಕುಳಿತಿದ್ದು ಕಂಡುಬಂತು.