

ಹಾವೇರಿ: ಸಂಚಾರ ದಟ್ಟಣೆ ನಿಯಂತ್ರಣ, ಫುಟ್‌ಪಾತ್ ಅತಿಕ್ರಮಣ ತೆರವು ಮತ್ತು ಪಾದಾಚಾರಿ ಮಾರ್ಗಗಳಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲೆಂದು ಸ್ಥಳೀಯ ನಗರಸಭೆಯಿಂದ ನಗರದ ಗುರುಭವನ ಪಕ್ಕದ ಅಕ್ಕಮಹಾದೇವಿ ಹೊಂಡದ ವಾಣಿಜ್ಯ ಮಳಿಗೆಗಳಲ್ಲಿ ಫುಡ್ ಕೋರ್ಟ್ ತೆರೆದು, ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಾಗಿದೆ.
ಗುರುಭವನ ಪಕ್ಕದ ಅಕ್ಕಮಹಾದೇವಿ ಹೊಂಡ ಪಾರ್ಕ್ ಆವರರಣದಲ್ಲಿ ಫುಡ್ ಕೋರ್ಟ್ ಆರಂಭಿಸಿದ್ದು, ಗುರುಭವನ ಎದುರಿನ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ 20ಕ್ಕೂ ಅಧಿಕ ತಳ್ಳುವ ಗಾಡಿಗಳು, ಚಾಟ್ಸ್ ಸೆಂಟರ್‌ಗಳು ಸ್ಥಳಾಂತರಗೊಂಡಿವೆ. ಇದರಿಂದ ಗುರುಭವನ ಬಳಿ ರಸ್ತೆಯಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ.
ನಗರದಲ್ಲಿ ಫುಟ್‌ಪಾತ್ ಅತಿಕ್ರಮಣ, ಸಂಚಾರ ದಟ್ಟಣೆ ಕುರಿತು ಜೂನ್ 10ರಂದು ‘ವಿಜಯವಾಣಿ’ ವ್ಯಾಪಾರ ಫುಟ್‌ಪಾತ್ ನುಂಗಿತ್ತ..’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಫುಡ್ ಸ್ಟ್ರೀಟ್ ಸ್ಥಾಪಿಸಲು ಸಲಹೆ ನೀಡಿತ್ತು.
ಶೌಚಗೃಹ ಬಾಗಿಲು ಬಂದ್
ಫುಡ್ ಕೋರ್ಟ್ ಆವರಣದಲ್ಲಿ ನಿರ್ಮಿಸಲಾಗಿರುವ ಶೌಚಗೃಹಗಳು ಸೂಕ್ತ ನಿರ್ವಹಣೆ ಇಲ್ಲದೇ ಬಂದ್ ಆಗಿವೆ. ಹಾಗಾಗಿ, ಇಲ್ಲಿಗೆ ಬರುವ ಸಾವಿರಾರು ಸಾರ್ವಜನಿಕರು ಶೌಚಕ್ಕೆ ಪರದಾಡುವಂತಾಗಿದೆ. ಇದೀಗ ಫುಡ್ ಕೋರ್ಟ್ ಆರಂಭವಾಗಿರುವ ಕಾರಣ ನಗರಸಭೆಯಿಂದ ಕೂಡಲೇ ಶೌಚಗೃಹಗಳ ದುರಸ್ತಿಪಡಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕಿದೆ. ಜತೆಗೆ ಇಲ್ಲಿನ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟರೆ ಆದಾಯವೂ ಬರಲಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ನಗರೋತ್ಥಾನ ಯೋಜನೆಯಡಿ ಅಕ್ಕಮಹಾದೇವಿ ಹೊಂಡದ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ. ಇದೇ ವೇಳೆ ಜತೆಗೆ ಶೌಚಗೃಹಗಳನ್ನೂ ದುರಸ್ಥಿಪಡಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಶಶಿಕಲಾ ರಾಮು ಮಾಳಗಿ ತಿಳಿಸಿದ್ದಾರೆ.