

ಹಾವೇರಿ: ಅತಿಕ್ರಮಣ ಮಾಡಿದ ಬೀದಿಬದಿ ವ್ಯಾಪಾರಸ್ಥರ ತೆರವುಗೊಳಿಸುವುದು, ಎಲ್‌ಬಿಎಸ್ ಮಾರುಕಟ್ಟೆಯ ರಸ್ತೆ ಅಗಲೀಕರಣ ಮಾಡುವುದು, ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕುವುದು, ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಾರ್ವಜನಿಕರು ನಗರಸಭೆಯ ಮುಂದಿಟ್ಟಿದ್ದಾರೆ.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನಗರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಹಲವು ಬೇಡಿಕೆಗಳ ಕುರಿತು ಪ್ರಸ್ತಾಪಿಸಿದರು.
ವಾಲ್ಮೀಕಿ ಸರ್ಕಲ್ ಬಳಿಯ ಐಡಿಬಿಐ ಬ್ಯಾಂಕ್ ಬಳಿ ಒತ್ತುವರಿಯಾದ ಜಾಗ ತೆರವುಗೊಳಿಸುವುದು. ಫುಟ್‌ಪಾತ್ ತೆರವು ಕಾರ್ಯಾಚರಣೆ, ಕಾಗಿನೆಲೆ ವೃತ್ತದ ಬಳಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಹಾಗೂ ಒಬ್ಬರು ಖಾಯಂ ಪೊಲೀಸ್ ಸಿಬ್ಬಂದಿ ನಿಯೋಜಿಸುವುದು. ಬೀದಿನಾಯಿಗಳ ಹಾವಳಿ ತಡೆಗಟ್ಟಬೇಕು. ವಿಶೇಷಚೇತನರಿಗೆ ನಗರಸಭೆಯಿಂದ ವಾಹನ ಸೌಲಭ್ಯ ನೀಡಬೇಕು. ಸಾರ್ವಜನಿಕ ಉದ್ಯಾನವನ, ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಬೀದಿ ದೀಪಗಳ ನಿರ್ವಹಣೆಗೆ ಕಂಟ್ರೋಲ್ ಪೆನಲ್ ಬೋರ್ಡ್‌ಗಳ ಖರೀದಿಗೆ ಅನುದಾನ ಮೀಸಲಿಡಬೇಕು. ಅಂಬೇಡ್ಕರ್‌ನಗರದ ಹರಿಜನ ಓಣಿಯಲ್ಲಿ ಸಿಸಿ ರಸ್ತೆ, ಸಿಡಿ, ಗಟಾರ ನಿರ್ಮಾಣ ಮಾಡಬೇಕು ಎಂದು ಜನ ಒತ್ತಾಯಿಸಿದರು.
ಪ್ರಕೃತಿ ವಿಕೋಪದಿಂದ ಹಾನಿ ಸಂಭವಿಸಿದರೆ ತುರ್ತು ಕಾರ್ಯಕ್ಕಾಗಿ ಶೇ.10ರಷ್ಟು ಅನುದಾನವನ್ನು ಮೀಸಲಿಡಬೇಕೆಂದು ಸಾರ್ವಜನಿಕರು ಸಭೆಯಲ್ಲಿ ಒತ್ತಾಯಿಸಿದರು. ನಗರದಲ್ಲಿ ನೀರಿನ ಕರ ವಸೂಲಿಗಾಗಿ ಪ್ರತ್ಯೇಕ ತಂಡಗಳನ್ನು ರಚನೆ ಮಾಡಬೇಕೆಂದು ಒತ್ತಾಯಿಸಿದರು. ಹಾಳಾದ ಕಾಂಕ್ರೀಟ್ ರಸ್ತೆಗಳನ್ನು ದುರಸ್ಥಿ ಮಾಡಿಸಬೇಕೆಂದು ಆಗ್ರಹಿಸಿದರು.
ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಮೊದಲು ಇವುಗಳ ನಿಯಂತ್ರಣ ಮಾಡಿ ಎಂದು ಸಾರ್ವಜನಿಕರು ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪ್ರಾಣಿ ದಯಾಸಂಘದವರು ಕೇಸ್ ಮಾಡುತ್ತಾರೆ. ಹಾಗಾಗಿ, ಮೊದಲು ಅವರೊಂದಿಗೆ ಸಭೆ ಆಯೋಜಿಸಿ. ‘ಅವರ ಮಕ್ಕಳಿಗೆ ನಾಯಿಗಳು ಕಚ್ಚಿದರೆ ಏನು ಮಾಡುತ್ತಾರೆ ? ಎಂದು ಕೇಳುತ್ತೇವೆ’ ಆಕ್ರೋಶ ಹೊರಹಾಕಿದರು. ಕಮಿಷನರ್ ಚನ್ನಪ್ಪ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಬಗ್ಗೆ ಸಂಬಂಧಟಪಟ್ಟವರ ಜತೆಗೆ ಚರ್ಚಿಸಲಾಗುವದು ಎಂದು ತಿಳಿಸಿದರು.
ಪ್ರಭಾರಿ ಪೌರಾಯುಕ್ತ ಎಚ್.ಬಿ.ಚನ್ನಪ್ಪ ಮಾತನಾಡಿ, ಹೆಗ್ಗೇರಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ಕಾರಂಜಿ ಮಾದರಿ, ಮನರಂಜನೆಗೆ ಉದ್ಯಾನ ರೀತಿಯಲ್ಲಿ ಅಭಿವೃದ್ಧಿ ಮಾಡುವಂತೆ ಅನುದಾನ ಸೇರ್ಪಡೆಗೆ ತಿಳಿಸಿದರು. ಅಮೃತ ಯೋಜನೆಯಡಿ ಹೆಗ್ಗೇರಿ ಕೆರೆ ಅಭಿವೃದ್ಧಿ ಮಾಡಲು ಅನುದಾನವಿದೆ ಎಂದು ಮಾಹಿತಿ ನೀಡಿದರು.
4 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ
ರಾಣೆಬೆನ್ನೂರ ಪಾಲಾಗಿದ್ದ ಸುಮಾರು 4 ಕೋಟಿ ರೂ. ವೆಚ್ಚದ ವಿದ್ಯುತ್ ಚಿತಾಗಾರವನ್ನು ಶಾಸಕ ರುದ್ರಪ್ಪ ಲಮಾಣಿ ಹಾವೇರಿಗೆ ತಂದಿದ್ದಾರೆ. ಶೇ.90ರಷ್ಟು ಹಣವನ್ನು ನಗರಸಭೆಯಿಂದ ಮರುಪಾವತಿ ಮಾಡಬೇಕಿದೆ. 5 ಕಂತುಗಳಲ್ಲಿ ಏಳು ವರ್ಷದೊಳಗೆ ಹಣವನ್ನು ಪಾವತಿ ಮಾಡಬೇಕು ಎಂದು ಸಹಾಯಕ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಎಲ್ಲ ಸದಸ್ಯರ ಜತೆಗೆ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಭಾಧ್ಯಕ್ಷೆ ಶಶಿಕಲಾ ಮಾಳಗಿ ತಿಳಿಸಿದರು.
ಬೀದಿಬದಿ ವ್ಯಾಪಾರಕ್ಕೆ ಸ್ಥಳ ಗುರುತು
ಹಾವೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ರಸ್ತೆ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಜನರಿಗೆ, ವಾಹನ ಸವಾರರಿಗೆ ಡಚಣೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಶಾಸಕರ ಜತೆಗೆ ಚರ್ಚಿಸಿ, ಬೀದಿಬದಿ ವ್ಯಾಪಾರಸ್ಥರಿಗಾಗಿಯೇ ಬಸ್ ನಿಲ್ದಾಣ ಬಳಿಯ ನಗರಸಭೆ ಜಾಗದಲ್ಲಿ, ಗೂಗಿಕಟ್ಟಿ, ನಾಗೇಂದ್ರನಮಟ್ಟಿ, ಹುಕ್ಕೇರಿಮಠ ಬಳಿ ಹೀಗೆ ಖಾಲಿ ಜಾಗಗಳಲ್ಲಿ ರೆನಲ್ ಮಾದರಿಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
31 ಕೋಟಿ ರೂ. ಆದಾಯ ನಿರೀಕ್ಷೆ
2024-25ನೇ ಸಾಲಿನಲ್ಲಿ ಡಿ.31ರ ವರೆಗೆ ಮನೆ ಕರ, ನೀರಿನ ಕರ, ಮಳಿಗೆಗಳ ಬಾಡಿಗೆ, ಅಭಿವೃದ್ಧಿ ಕರ, ಸಂತೆ ಶುಲ್ಕ ಹೀಗೆ ವಿವಿಧ ತೆರಿಗೆ ಹಾಗೂ ಯೋಜನೆಗಳಿಂದ 16.48ಕೋಟಿ ರೂ.ಗಳು ಜಮೆಯಾಗಿದೆ. ಈ ಪೈಕಿ ಹೊಸ ರಸ್ತೆ ನಿರ್ಮಾಣ, ಗಟಾರ ಮತ್ತು ಸಿ.ಡಿ ನಿರ್ಮಾಣ, ಹೊಸ ಪೈಪ್‌ಲೈನ್, ಹೊಸ ಪಂಪಸೆಟ್ ಖರೀದಿ, ರಸ್ತೆ ದುರಸ್ಥಿ, ಮೆಟಲಿಂಗ್, ನೀರು ಸರಬರಾಜು ಖರೀದಿ, ಬೀದಿ ದೀಪ ನಿರ್ವಹಣೆ, ಸಾರ್ವಜನಿಕ ಉದ್ಯಾನ ಮತ್ತು ಕೆರೆ ಅಭಿವೃದ್ಧಿ ಹೀಗೆ ವಿವಿಧ ಕೆಲಸ ಕಾರ್ಯಗಳಿಗಾಗಿ 21.97 ಕೋಟಿ ರೂ.ಹಣವನ್ನು ಖರ್ಚು ಮಾಡಲಾಗಿದೆ. 2025-26ನೇ ಸಾಲಿನಲ್ಲಿ ವಿವಿಧ ತೆರಿಗೆ ಹಾಗೂ ಯೋಜನೆಗಳಿಂದ ಒಟ್ಟು 31.95 ಕೋಟಿ ರೂ.ಗಳು ಜಮೆಯಾಗುವ ನಿರೀಕ್ಷೆ ಇದೆ. ವಿವಿಧ ಕೆಲಸ ಕಾರ್ಯಗಳಿಗಾಗಿ 31.76 ಕೋಟಿ ರೂ.ಹಣ ಖರ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ ಎಂದು ನಗರಸಭೆ ಸಿಬ್ಬಂದಿ ಮಾಹಿತಿ ನೀಡಿದರು.