ವಿವಿಧ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಫೆ.18ರಂದು ಚಾಲನೆ; 400 ಕೋಟಿ ರೂ. ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ; ರುದ್ರಪ್ಪ ಲಮಾಣಿ ಹೇಳಿಕೆ

SP Office Haveri
Published on

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ.18ರಂದು ನಗರಕ್ಕೆ ಆಗಮಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ವಿಜ್ಞಾನ ಭವನ, ಗಾಂಧಿ ಭವನ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ಅಂದಾಜು 411.60 ಕೋಟಿ ರೂ. ವೆಚ್ಚದ 14 ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ 11 ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಫೆ.18ರಂದು ಮಧ್ಯಾಹ್ನ 3 ಗಂಟೆಗೆ ನಗರಕ್ಕೆ ಆಗಮಿಸಿ, ಗಾಂಧಿ ಭವನ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಉದ್ಘಾಟನೆ ನೆರವೇರಿಸುವರು. ಉಳಿದ ತರ ಕಾಮಗಾರಿಗಳಿಗೆ ಕೆ.ಎಲ್.ಇ. ಕಾಲೇಜು ಆವರಣದಲ್ಲಿ ನಿರ್ಮಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೃಹ ಸಚಿವ ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ, ಸಚಿವ ಎಚ್.ಕೆ.ಪಾಟೀಲ, ಸಚಿವ ಜಮೀರ್ ಅಹ್ಮದ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವು ಸಚಿವರು, ಶಾಸಕರು ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಇತರರು ಉಪಸ್ಥಿತರಿದ್ದರು.
14 ಕಾಮಗಾರಿ ಲೋಕಾರ್ಪಣೆ:
18 ಕೋಟಿ ರೂ. ವೆಚ್ಚದ ಹಾವೇರಿ ಜಿಲ್ಲಾ ಪೊಲೀಸ್ ಕಾರ್ಯಾಲಯ, 6.80 ಕೋಟಿ ರೂ. ಮೊತ್ತದ ಹಾವೇರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, 3 ಕೋಟಿ ರೂ. ವೆಚ್ಚದ ಗಾಂಧಿ ಭವನ, 5.75 ಕೋಟಿ ರೂ. ಮೊತ್ತದ ಆರ್ಮರಿ ಕಟ್ಟಡ, ಡಾಗ್ ಕೆನಾಲ್ ಮತ್ತು ಎಂ.ಟಿ.ಶೆಡ್ ಹಾಗೂ 10.17 ಕೋಟಿ. ಮೊತ್ತದ ಮೂರು ಅಂತಸ್ತಿನ 36 ವಸತಿ ಗೃಹ, 11.27 ಕೋಟಿ ರೂ. ಮೊತ್ತದ ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಾನುವಾರು ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಶೆಡ್, 25 ಕೋಟಿ ರೂ. ಮೊತ್ತದ ಅಕ್ಕೂರ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ, 1.29 ಕೋಟಿ ರೂ. ಮೊತ್ತದ ಕೆಆರ್‌ಐಡಿಎಲ್‌ನ ಸ್ವಂತ ಕಚೇರಿ ಕಟ್ಟಡ, 23.75 ಕೋಟಿ ರೂ. ಮೊತ್ತದ ಕಳ್ಳಿಹಾಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು(ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ) ಹಾಗೂ 11.19 ಕೋಟಿ ರೂ. ಮೌಲ್ಯದ ಗುತ್ತಲ ಆರ್.ಎಂ.ಎಸ್.ಎ. ಸರ್ಕಾರಿ ಉರ್ದು ಪ್ರೌಢಶಾಲೆ ಉದ್ಘಾಟನಾ ಸಮಾರಂಭ ಜರುಗಲಿದೆ.
ಬ್ಯಾಡಗಿ ಕೃಷಿ ಉತ್ನನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ 2.80 ಕೋಟಿ ರೂ. ಮೊತ್ತದ ರೈತ ಭವನ, 2 ಕೋಟಿ ರೂ. ಮೊತ್ತದ ಅರೆಮಲ್ಲಾಪೂರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ 75.42 ಲಕ್ಷ ಮೊತ್ತದ ಚೌಡಯ್ಯದಾನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 5.54 ಕೋಟಿ ಮೊತ್ತದ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಹಿರಿಯರಿಗೆ ಕನ್ನಡಕ ವಿತರಣೆ ಹಾಗೂ ಶಾಲಾ ಮಕ್ಕಳ ಕನ್ನಡ ವಿತರಣೆ ಕಾರ್ಯಕ್ರಮಗಳ ಉದ್ಘಾಟನೆ ಜರುಗಲಿದೆ.
11 ಕಾಮಗಾರಿಗಳ ಶಂಕುಸ್ಥಾಪನೆ:
ನೆಲೋಗಲ್‌ನಲ್ಲಿ 5 ಕೋಟಿ ರೂ. ಮೊತ್ತದ ಸರ್ಕಾರಿ ಕಾನೂನು ಕಾಲೇಜು, 56.84 ಕೋಟಿ ರೂ. ಮೊತ್ತದ ಕೋಳೂರು- ಗಣಜೂರು ಕೈಗಾರಿಕಾ ಅಭಿವೃದ್ಧಿ, ನಗರಸಭೆ ಆಯುಕ್ತರ ಹಳೆಯ ವಸತಿ ಗೃಹ ಜಾಗದಲ್ಲಿ 1.50 ಕೋಟಿ ರೂ. ಮೊತ್ತದ ವಾಣಿಜ್ಯ ಸಂಕೀರ್ಣ ನಿರ್ಮಾಣ, 141.62 ಕೋಟಿ ರೂ. ಮೊತ್ತದ ಹಾವೇರಿ ನಗರಕ್ಕೆ ಸಗಟು ಮತ್ತು ಗುತ್ತಲ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
10 ಕೋಟಿ ರೂ. ಮೊತ್ತದ ಬ್ಯಾಡಗಿ ತಾಲೂಕು ಆಡಳಿತ ಭವನ, ಬ್ಯಾಡಗಿ ತಾಲೂಕು ಎಕ್ಕುಂಬಿ-ಮೊಳಕಾಲ್ಮೂರ ರಾಜ್ಯ ಹೆದ್ದಾರಿಯಿಂದ ಬೀರೂರ-ಸಮ್ಮಸಗಿ ರಾಜ್ಯ ಹೆದ್ದಾರಿಗೆ ಕೂಡುವ ರಾಜ್ಯ ಹೆದ್ದಾರಿ ಸುಧಾರಣೆ ಮಾಡುವ 9.50 ಕೋಟಿ ರೂ. ಮೊತ್ತದ ಕಾಮಗಾರಿಗೆ ಹಾಗೂ ಬ್ಯಾಡಗಿ ತಾಲೂಕು ಎಕ್ಕುಂಬಿ-ಮೊಳಕಾಲ್ಮೂರ ರಾಜ್ಯ ಹೆದ್ದಾರಿಯಿಂದ ಬೀರೂರ-ಸಮ್ಮಸಗಿ ರಾಜ್ಯ ಹೆದ್ದಾರಿಗೆ ಕೂಡುವ ರಾಜ್ಯ ಹೆದ್ದಾರಿ ಸುಧಾರಣೆ ಮಾಡುವ 4 ಕೋಟಿ ರೂ. ಮೊತ್ತದ ಕಾಮಗಾರಿ, 52 ಕೋಟಿ ರೂ. ಮೊತ್ತದ ರಟ್ಟಿಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಕಾಮಗಾರಿ ಹಾಗೂ 50.13 ಲಕ್ಷ ರೂ. ಮೊತ್ತದ ಹಿರೇಕೆರೂರ ಪಶು ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಎರಡು ವರ್ಷದಲ್ಲಿ ನೀರಿನ ಸಮಸ್ಯೆ ನೀಗಿಸುವೆ
ಅಮೃತ 2.0 ಯೋಜನೆಯಡಿ ಹಾವೇರಿ, ಗುತ್ತಲ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ 141.62 ಕೋಟಿ ರೂ. ಹಾಗೂ ರಟ್ಟಿಹಳ್ಳಿ ಪಟ್ಟಣಕ್ಕೆ 52 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹೆಗ್ಗೇರಿ ಕೆರೆ ಮತ್ತು ತುಂಗಭದ್ರಾ ನದಿ ಮೂಲದಿಂದ ನೀರು ಸರಬರಾಜು ಮಾಡಲಾಗುವುದು. ಕಂಚಾರಗಟ್ಟಿ ನಗರದ ಕುಡಿಯುವ ನೀರು ದಾಸ್ತಾನು ಮಾಡಿಕೊಳ್ಳಲು ಬ್ಯಾರೇಜ್ ನಿರ್ಮಾಣಕ್ಕೆ ಸಲ್ಲಿಸಲಾದ ಪ್ರಸ್ತಾವನೆಗೆ ಶೀಗ್ರವೇ ಅನುಮೋದನೆ ದೊರೆಯಲಿದೆ. ಮುಂದಿನ ಎರಡು ವರ್ಷಗಳಲ್ಲಿ ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ರುದ್ರಪ್ಪ ಲಮಾಣಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net