

ಹಾವೇರಿ: ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡುವುದಿಲ್ಲ. ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಪ್ರಕರಣ ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ನರಸೀಪುರದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಾರಂಭಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಎಸ್.ಐ.ಟಿಗೆ ವಹಿಸಲು ಬಿಜೆಪಿ ಆಗ್ರಹ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಎಸ್.ಐ.ಟಿನಲ್ಲಿ ಇರುವವರೂ ಪೊಲೀಸರೇ ಅಲ್ಲವೇ. ಪ್ರಕರಣದ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿ ಬಂದ ನಂತರ ತೀರ್ಮಾನಿಸಲಾಗುವುದು ಎಂದರು.
ಘಟನೆ ನಡೆದು ವಾರ ಕಳೆದರೂ ಸರ್ಕಾರದ ಪರವಾಗಿ ಯಾರೂ ಸಾಂತ್ವನ ಹೇಳಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸಂತ್ರಸ್ತೆಯ ಸಹೋದರ, ಸಂಬಂಧಿಕರು ಈಗ ತಾನೇ ಅರ್ಜಿ ಕೊಟ್ಟಿದ್ದಾರೆ. ಅದನ್ನು ಪರಿಗಣಿಸಲಾಗುವುದು. ನೈತಿಕ ಪೊಲೀಸ್ ಗಿರಿ ಬಗ್ಗೆ ಮಾತನಾಡಿದರೆ ಮಾತ್ರ ಕ್ರಮ ನಾ ? ಮಾತನಾಡದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂದರು. ಈಗಾಗಲೇ ಆರೋಪಿತರನ್ನು ಬಂಧಿಸಿದ್ದು, ತನಿಖೆ ನಡೆದಿದೆ ಎಂದರು.
ಬೆಳಗಾವಿ ವಂಟಮುರಿ ಪ್ರಕರಣದಲ್ಲಿ ಮಾತ್ರ ತಕ್ಷಣ ಭೇಟಿ ನೀಡಿ ಪರಿಹಾರ ನೀಡಿದಿರಿ ಎಂಬ ಪ್ರಶ್ನೆಗೆ, ಅಲ್ಲಿಯೇ ಇದ್ದ ಗೃಹ ಸಚಿವರಿಗೆ ಭೇಟಿಯಾಗುವಂತೆ ಸೂಚಿಸಿದ್ದೆ. ಇಲ್ಲಿ ಗೃಹ ಸಚಿವರು ಇರಲಿಲ್ಲ. ಮಾಜಿ ಸಚಿವ ಬಸವರಾಜ ಶಿವಣ್ಣನವರ ಭೇಟಿ ನೀಡಿದ್ದಾರೆ. ಸಂತ್ರಸ್ತೆಯನ್ನು ಭೇಟಿ ಮಾಡುವುದು, ಸಾಂತ್ವನ ಹೇಳುವುದು ಒಂದು ಭಾಗವಾದರೆ, ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳುವುದು ಮತ್ತೊಂದು ಭಾಗ ಎಂದರು.
ಸಂತ್ರಸ್ತೆಗೆ ಸೂಕ್ತ ಚಿಕಿತ್ಸೆ ನೀಡದೇ ಆರೋಪಿಗೆ ಪೊಲೀಸರು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಬಗ್ಗೆ ಶಾಸಕ ಬಸವರಾಜ ಶಿವಣ್ಣನವರ ಜತೆ ಮಾತನಾಡಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಫೆಬ್ರವರಿಯಲ್ಲೇ ಬಜೆಟ್ ಮಂಡನೆ
ಪ್ರತಿ ಬಾರಿ ಮಾರ್ಚ್‌ನಲ್ಲಿ ಬಜೆಟ್ ಮಂಡಿಸಲಾಗುತ್ತಿತ್ತು. ಈ ಬಾರಿ ಮಾರ್ಚ್ ಮೊದಲ ವಾರದೊಳಗೆ ಲೋಕಸಭೆ ಚುನಾವಣೆಯ ನೀತಿಸಂಹಿತೆ ಘೋಷಣೆಯಾಗುವುದರಿಂದ ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡಿಸಲಾಗುವುದು ಎಂದರು.
ಹೆಗಡೆಗೆ ಸಂಸ್ಕೃತಿ ಇಲ್ಲ
ಅನಂತಕುಮಾರ ಹೆಗಡೆಯವರು ಏಕವಚನದಲ್ಲಿ ಮಾತನಾಡುವುದನ್ನು ಕಲಿಸಿದ್ದೇ ಸಿದ್ದರಾಮಯ್ಯವರು ಎಂದು ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಅವರು ರಾಜಕೀಯವಾಗಿ ಆರೋಪ ಮಾಡುತ್ತಾರೆ. ಅನಂತಕುಮಾರ ಹೆಗಡೆ ಇವತ್ತಿನವರೆಗೆ ನಾಪತ್ತೆಯಾಗಿದ್ದರು. ಚುನಾವಣೆ ಹತ್ತಿರ ಬಂದಂತೆ ಕಾಣಿಸಿಕೊಂಡು ಹೇಳಿಕೆ ನೀಡಿದ್ದಾರೆ. ಈವರೆಗೆ ಹೆಗಡೆ ಕ್ಷೇತ್ರಕ್ಕೆ ಏನಾದರೂ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಸಿಎಂ, ಸಂಸ್ಕೃತಿ ಎಂದರೆ ಮನುಷ್ಯತ್ವ. ಮೊದಲು ಮನುಷ್ಯತ್ವ ಇರಬೇಕು ಎಂದರು.