

ಹಾವೇರಿ: ಇಲ್ಲಿನ ನಗರಸಭೆ ವತಿಯಿಂದ ಮೂಲದಿಂದಲೇ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸುವ ಉದ್ದೇಶದಿಂದ ಮನೆ ಮನೆಗೆ ತಲಾ ಎರಡು ಕಸದ ಬುಟ್ಟಿ ವಿತರಿಸುವ ಕಾರ್ಯಕ್ರಮಕ್ಕೆ ವಿಧಾನಸಭೆ ಉಪ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ನಗರದಲ್ಲಿ ಬುಧವಾರ ಚಾಲನೆ ನೀಡಿದರು.
ನಗರಸಭೆ ವತಿಯಿಂದ ಇಲ್ಲಿನ ಸುಭಾಷ ವೃತ್ತದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ರುದ್ರಪ್ಪ ಲಮಾಣಿ ಉದ್ಘಾಟಿಸಿದರು. ಬಳಿಕ ಸಾಂಕೇತಿಕವಾಗಿ ವೃತ್ತದ ಪಕ್ಕದ ಕೆಲ ಮನೆಗಳಿಗೆ ತೆರಳಿ ತಲಾ ಎರಡು ಡಸ್ಟ್ ಬಿನ್ ವಿತರಿಸಿದರು. ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಹಸಿ, ಕಸ ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ, ನಗರಸಭೆಯ ಕಸದ ವಾಹನಗಳಿಗೆ ಕೊಡುವಂತೆ ಮನವಿ ಮಾಡಿದರು.
ನಗರಸಭೆ ಪೌರಾಯುಕ್ತ ಡಿ.ದೇವರಾಜು ಮಾತನಾಡಿ, ಸ್ವಚ್ಛ ಭಾರತ ಯೋಜನೆಯಡಿ ನಗರಸಭೆ ವತಿಯಿಂದ 40 ಲಕ್ಷ ರೂ. ವೆಚ್ಚದಲ್ಲಿ 36 ಸಾವಿರ ಕಸದ ಬುಟ್ಟಿಗಳನ್ನು ಖರೀದಿಸಲಾಗಿದೆ. ಇಂದಿನಿಂದ ನಗರ ಸಭೆ ಸಿಬ್ಬಂದಿ ಮೂಲಕ ಪ್ರತಿಯೊಂದು ಮನೆ ಮನೆಗೆ ತಲಾ ಎರಡು ಕಸದ ಡಬ್ಬಿಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ಸದಸ್ಯ, ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಸಭೆ ಸದಸ್ಯರಾದ ಜಹೀರಾಬಾನು ಜಮಾದಾರ, ಉಮೇಶ ಕುರುಬರ, ರೇಣುಕಾ ಪುತ್ರನ್, ಪರಿಸರ ಇಂಜಿನಿಯರ್ ಶಿವರಾಜ ಬಿ.ಕೆ., ಆರೋಗ್ಯ ನಿರೀಕ್ಷಕರಾದ ರಮೇಶ ಮುಂಜೋಜಿ, ಅಲ್ತಮಶ್, ಸಿಬ್ಬಂದಿ, ಇತರರಿದ್ದರು.
ಸಮರ್ಪಕ ವಿತರಣೆಯಾಗಲಿ
ಕಸದ ಡಬ್ಬಿ ವಿತರಿಸದ ಕುರಿತು ‘ಕಸದ ಡಬ್ಬಿ ಮೂಲೆಗೆ, ತ್ಯಾಜ್ಯ ಬೀದಿಗೆ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಆ.1ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಕೊನೆಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಆದರೆ, ನಗರಸಭೆ ವ್ಯಾಪ್ತಿಯ ಎಲ್ಲ 16,000 ಮನೆಗಳಿಗೂ ತಪ್ಪದೇ ಕಸದ ಡಬ್ಬಿಗಳ ಸಮರ್ಪಕ ವಿತರಣೆ ಮಾಡುವ ಜವಾಬ್ದಾರಿ ಇದೆ.