ವಸತಿ ಹೆಸರಲ್ಲಿ ವಾಣಿಜ್ಯ ಕಟ್ಟಡ ತಲೆ ಎತ್ತುತ್ತಿವೆ; ಹಾವೇರಿ ನಗರಸಭೆ ಸದಸ್ಯರು, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಆಗ್ರಹ

Subhash Bengaluru
Published on

ಹಾವೇರಿ: ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು ಬಹುಮಹಡಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಎಸ್‌ಪಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ ಹಾಗೂ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಭಾಷ ಬೆಂಗಳೂರ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ನಿಗದಿತ ಮಿತಿಯೊಳಗೆ ಮನೆ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಆದರೆ, ಕೆಲವರು ವಸತಿ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ಅನುಮತಿ ಪಡೆದು ಬಹುಮಹಡಿ ವಾಣಿಜ್ಯ ಮಳಿಗೆಗಳನ್ನಾಗಿ ನಿರ್ಮಿಸುತ್ತಿದ್ದಾರೆ. ಆದರೂ, ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈ ಕಟ್ಟಡಗಳ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೆಲ ನಗರಸಭೆ ಸದಸ್ಯರೂ ನಂತರದಲ್ಲಿ ಸಹಮತ ವ್ಯಕ್ತಪಡಿಸಿ ಒಪ್ಪಿಗೆ ಪತ್ರಕೊಟ್ಟಿದ್ದಾರೆ. ಇದು ಹಲವು ಸಂಶಯಗಳನ್ನು ಮೂಡಿಸಿದೆ. ಈ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಿಲ್ಲ. ಹೀಗಾಗಿ ಮುಖ್ಯ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಹಾಗಾಗಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ನಗರದಲ್ಲಿ ಯುಜಿಡಿ ಕಾಮಗಾರಿಯೂ ಹಳ್ಳ ಹಿಡಿದಿದೆ. 24/7 ನಿರಂತರ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿದೆ. ಹೆಗ್ಗೇರಿ ಕೆರೆ ಅಭಿವೃದ್ಧಿ ಕಾಣುತ್ತಿಲ್ಲ. ನಗರದ ರಸ್ತೆಗಳು ಗುಂಡಿಯಿಂದ ಕೂಡಿವೆ. ಸರಿ ಇರುವ ರಸ್ತೆಗಳನ್ನು ಗ್ಯಾಸ್ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದು ಹಾಳು ಮಾಡಲಾಗುತ್ತಿದೆ. ನಗರಸಭೆಯಲ್ಲಿ ಏಜೆಂಟರ ಹಾವಳಿ ವಿಪರೀತವಾಗಿದೆ. ಸಿಎ ಸೈಟ್‌ಗಳಿಗೂ ಸಹ ಇ-ಸ್ವತ್ತು ಮಾಡಿಕೊಡಲಾಗುತ್ತಿದೆ. ಶಾಂತಿನಗರದಲ್ಲಿ ನಿರ್ಮಿಸಿತ್ತಿರುವ ಆಶ್ರಯ ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಕಳಪೆ ಸಾಮಗ್ರಿಗಳನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಪೌರಾಯುಕ್ತರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕರ್ತವ್ಯಲೋಪದಡಿ ಅಮಾನತ್ತು ಆಗಿದ್ದರೂ ರಾಜಕೀಯ ಪ್ರಭಾವ ಬಳಸಿ ಮತ್ತೆ ಬಂದಿದ್ದಾರೆ. ಕೂಡಲೇ ಇವರನ್ನು ಅಮಾನತ್ತು ಮಾಡಬೇಕು. ಇಲ್ಲವೇ ಬೇರೆಡೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸತೀಶ ಮಡಿವಾಳರ, ಅಶೋಕ ಮರೆಣ್ಣನವರ, ಮೌನೇಶ ಪಾಟೀಲ, ಸಂಗಪ್ಪ ಕಲ್ಯಾಣಶೆಟ್ಟರ, ಮಂಜುನಾಥ ಹರಿಜನ, ದೇವು ಬಾರ್ಕಿ, ಶಾಹೀದ ದೇವಿಹೊಸೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net