ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಸಿಐಟಿಯು ಆಗ್ರಹ

9 HVR 7
Published on

ಹಾವೇರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಘನತೆಯ ಬದುಕನ್ನು ವಿನಾಶಗೊಳಿಸುತ್ತವೆ. ಹಾಗಾಗಿ, ಈ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಕರಾಳ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕಾರ್ಮಿಕರು ಆಗ್ರಹಿಸಿದರು.

ದೇಶವ್ಯಾಪಿ ಕಾರ್ಮಿಕರ ಮುಷ್ಕರದ ಅಂಗವಾಗಿ ನಗರದಲ್ಲಿ ಬುಧವಾರ ಸಿಐಟಿಯು ನೇತೃತ್ವದಲ್ಲಿ ನಗರದ ಮುರುಘರಾಜೇಂದ್ರ ಮಠದಿಂದ ಆರಂಭವಾದ ರ‌್ಯಾಲಿ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಸಾಗಿತು. ನಂತರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ನಾಲ್ಕು ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕರ ರಕ್ಷಣಾತ್ಮಕ ಅಂಶಗಳು, ಜೀವಿಸುವ ಹಕ್ಕು, ಮೂಲಭೂತ ಹಕ್ಕುಗಳು, ವೇತನ ಕುರಿತ ವ್ಯಾಖ್ಯಾನ, ಪ್ರತಿಭಟನೆ ಹಕ್ಕು, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬಂಧ, ವೇತನ ಚೌಕಾಶಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳನ್ನು ಮೊಟಕುಗೊಳಿಸಲಿವೆ ಹಾಗೂ ಕಲ್ಯಾಣ ರಾಜ್ಯದ ಪರಿಕಲ್ಪನೆಗಳನ್ನು ದುರ್ಬಲಗೊಳಿಸಲಿವೆ. ಕಾರ್ಪೋರೇಟ್ ಗಳಿಗೆ ಕಡಿವಾಣವಿಲ್ಲದ ಲಾಭವನ್ನು ಗಳಿಸಲು ರಹದಾರಿ ನಿರ್ಮಿಸಿ, ಕಾರ್ಮಿಕರ ಪಾಲಿಗೆ ಮರಣ ಶಾಸನಗಳಾಗುತ್ತವೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಈವರೆಗೂ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದೇ ಅನ್ಯಾಯ ಎಸಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಈ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ಅಂದಾನೆಪ್ಪ ಹೆಬಸೂರು, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಗ್ರಾಪಂ ನೌಕರರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಜಗದೀಶ ಕೋಟಿ, ಬಸವರಾಜ ಎಸ್., ಚೈತ್ರಾ ಎಸ್.ಕೆ., ಪ್ರಕಾಶ ದೇವರಗುಡ್ಡ, ಶಾಂತಾ ಗಡ್ಡಿ, ರುದ್ರಪ್ಪ ಜಾಬೀನ, ಹಬೀಬ ಮುಲ್ಲಾ, ನಾರಾಯಣ ಕಾಳೆ, ಸುಭಾಸ ಸೊಟ್ಟೆಪ್ಪನವರ, ಚನವೀರಯ್ಯ ಹಿರೇಮಠ, ರಿಯಾಜ್ ಮರಪಾಜೆ, ಹುಸೇನಸಾಬ ಏರಿಮನಿ, ಈರಪ್ಪ ವಡ್ಡರ, ರೇಣುಕಮ್ಮ ಕಸವಾಡ, ನಾಗಮ್ಮ ಒಣರೊಟ್ಟಿ, ಮಂಜುಳಾ ಹಾನಗಲ್, ಮಂಜುಳಾ ತಡಸ, ಜಯಮ್ಮ ಬೆಳವಿಗಿ, ದೀಪಾ ಛಲವಾದಿ, ಜ್ಯೋತಿ ಮಾಸೂರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net