ಬಾಲ್ಯ ವಿವಾಹ ತಡೆಗೆ ಪ್ರತಿಯೊಬ್ಬರೂ ಪಣ ತೊಡಬೇಕು; ನ್ಯಾಯಾಧೀಶ ಬಿ.ಆರ್. ಮುತಾಲಿಕದೇಸಾಯಿ ಹೇಳಿಕೆ

29 HVR 5
Published on

ಹಾವೇರಿ: ಬಾಲ್ಯ ವಿವಾಹ ಎನ್ನುವುದು ಸಾಮಾಜಿಕ ಪಿಡುಗಾಗಿದೆ. ಈ ಅನಿಷ್ಠ ಪದ್ಧತಿ ತೊಡೆದು ಹಾಕಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್.ಮುತಾಲಿಕದೇಸಾಯಿ ಹೇಳಿದರು.

ನಗರದ ಉರ್ದು ಪ್ರೌಢಶಾಲೆಯಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ತಡೆಗೆ ಗೌರವಾನ್ವಿತ ಸುಪ್ರೀಂಕೋರ್ಟ್ ಹಾಗೂ ಉಚ್ಚ ನ್ಯಾಯಾಲಯಗಳು ಹಲವಾರು ನಿರ್ದೇಶನಗಳನ್ನು ನೀಡಿವೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಬಾಲ್ಯ ವಿವಾಹ ತಡೆಗೆ ಕೈಜೋಡಿಸಬೇಕು. ತಮ್ಮ ಸುತ್ತಮುತ್ತ ಇಂತಹ ಪ್ರಕರಣಗಳು ಕಂಡುಬಂದಲ್ಲಿ 1098 ಉಚಿತ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಕಾನೂನಿನ ನೆರವಿನ ಅವಶ್ಯಕತೆ ಇದ್ದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸಿ ಕಾನೂನು ನೆರವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ಯಾನಲ್ ವಕೀಲ ಕೆ.ಜಿ.ಕಿತ್ತೂರ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ಶಾಲಾ ಮುಖ್ಯೋಪಾಧ್ಯಾಯ ಡಾ.ಬಿ.ಎಂ.ಬೇವಿನಮರದ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net