

ಹಾವೇರಿ: ಇಲ್ಲಿನ ಹೆಗ್ಗೇರಿ ಕೆರೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಅಪರೂಪದ ನೀರುನಾಯಿ (ಫ್ರೆಶ್ ವಾಟರ್ ಓಟರ್ ಅಥವಾ ಸಿಹಿನೀರು ನಾಯಿ)ಗಳ ಹಿಂಡು ಹಾವೇರಿ ಸಮೀಪದ ಚಿಕ್ಕಲಿಂಗದಹಳ್ಳಿ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿವೆ.
ಸಮುದ್ರದವರೆಗಿನ ಹಿನ್ನೀರು ಹಾಗೂ ನದಿಗಳಲ್ಲಿ ಹೆಚ್ಚಾಗಿ ಕಂಡುಬರುವ ನೀರುನಾಯಿಗಳ ಹಿಂಡು ಹಾವೇರಿಯ ಐತಿಹಾಸಿಕ ಹೆಗ್ಗೇರೆ ಕೆರೆಯಲ್ಲಿ ಫೆಬ್ರವರಿಯಲ್ಲಿ ಕಾಣಿಸಿಕೊಂಡಿದ್ದವು. ಇದೀಗ ಹೆಗ್ಗೇರಿ ಕೆರೆಯ ಹತ್ತಿರದಲ್ಲಿರುವ ಚಿಕ್ಕಲಿಂಗದಹಳ್ಳಿ ಕೆರೆಯಲ್ಲಿ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿವೆ.
ಈ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ಮೀನು ಇರುವುದರಿಂದ ಹೆಗ್ಗೇರಿ ಕೆರೆಯಿಂದ ಈ ಕೆರೆಗೆ ಬಂದಿರಬಹುದು ಎಂದು ಊಹಿಸಲಾಗಿದೆ. ಸುಮಾರು 15ಕ್ಕೂ ಅಧಿಕ ನೀರುನಾಯಿಗಳ ಹಿಂಡು ಇರುವುದು ಪತ್ತೆಯಾಗಿದೆ. ಇವುಗಳಲ್ಲಿ ಆರು ಮರಿಗಳು, ಆರು ದೊಡ್ಡ ಅಂದಾಜು ಸುಮಾರು 1 ಮೀ.ನಿಂದ 2 ಮೀಟರ್ ಉದ್ದ ಇರುವ ನೀರು ನಾಯಿಗಳಿವೆ. ಇಲ್ಲಿರುವ ನೀರುನಾಯಿ ಚಿಕ್ಕ ನೀರುನಾಯಿ ಪ್ರಭೇದದ್ದು ಎನ್ನಾಗಿದೆ. ಈ ಕುರಿತು ಎಂಬುದನ್ನು ಸಂಬಂಧಪಟ್ಟವರು ಸಂಶೋಧಿಸಿ ಖಚಿತಪಡಿಸಬೇಕಿದೆ.
ಮೀನು ಭೇಟೆಯಲ್ಲಿ ನಿಪುಣ :
ನೀರು ನಾಯಿಗಳ ಪ್ರಮುಖ ಆಹಾರ ಮೀನು. ಪ್ರತ್ಯೇಕವಾಗಿ ಮೀನು ಬೇಟೆಯಾಡುವ ನೀರುನಾಯಿಗಳು ಇದರಲ್ಲಿ ನಿಪುಣತೆ ಸಾಧಿಸಿವೆ. ಆದರೆ, ಒಟ್ಟಿಗೆ ಮಲವಿಸರ್ಜನೆ ಮಾಡುವ ಮೂಲಕ ತಮ್ಮ ಗಡಿ ಗುರುತಿಸುವ ಕಾರ್ಯವನ್ನು ಮಾಡುತ್ತವೆ. ವೈರಿಗಳು ತಮ್ಮ ಪ್ರದೇಶಕ್ಕೆ ನುಗ್ಗದಂತೆ ಇವು ಎಚ್ಚರಿಕೆ ನೀಡುತ್ತವೆ. ಹಾವುಗಳು, ಉಭಯಚರಗಳು, ಇಲಿ, ಹೆಗ್ಗಣ, ಸಣ್ಣ ಸಸ್ತನಿಗಳು ಮತ್ತು ಚಿಕ್ಕ ಹಕ್ಕಿಗಳನ್ನೂ ಭೇಟೆಯಾಡುತ್ತವೆ. ಇವುಗಳ ಜೀವಿತಾವಧಿ 4ರಿಂದ 10 ವರ್ಷಗಳು. ವನ್ಯಜೀವಿಗೆ ಯಾವುದೇ ಗಡಿ ತಿಳಿದಿಲ್ಲ. ತನ್ನ ಸಂರಕ್ಷಣೆಗಾಗಿ ಹೋರಾಟ ಈ ಸಂರಕ್ಷಿತ ಪ್ರದೇಶದ ಹೊರಗೆ ನಡೆಯುತ್ತದೆ.
ಕೆರೆಯ ಪರಸರಕ್ಕೆ ಬಂದಿದ್ದು ಹೇಗೆ ?
ಕಾವೇರಿ, ಕಾಳಿ, ತುಂಗಭದ್ರಾ ನದಿಗಳ ಪರಿಸರದಲ್ಲಿ ದೊಡ್ಡ ತೊರೆಗಲ್ಲಿ ಕಂಡು ಬರುವ ಸಿಹಿನೀರು ನಾಯಿಗಳು ಹಂಪಿಯ ತುಂಗಭದ್ರಾ ನದಿಯಲ್ಲಿ ಕಂಡು ಬರುವುದು ಸಾಮಾನ್ಯ. ಜಿಲ್ಲೆಯ ಕೆಲವು ದೊಡ್ಡ ಮತ್ತು ಸಣ್ಣ ಕೆರೆಗಳಿಗೆ ತುಂಗಭದ್ರಾ ನೀರನ್ನು ಯುಟಿಪಿ ಕಾಲುವೆಗಳ ಮೂಲಕ ಹರಿಸಿದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಒಳಗಾಗಿ ಅಥವಾ ವಲಸೆ ಹೋಗುವ ಇವುಗಳ ಗುಣದಿಂದ ಇಲ್ಲಿಗೆ ಬಂದಿರುವ ಸಾಧ್ಯತೆಗಳಿವೆ.
ಕೋಟ್:
ನೀರುನಾಯಿಗಳು ಕಾಣಿಸಿಕೊಂಡಿರುವ ಕೆರೆಯ ಪರಿಸರವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕು. ನೀರುನಾಯಿಗಳ ರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ, ಸರ್ಕಾರ ಈಗಲೇ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು. ಅಳಿವಿನ ಅಂಚಿನಲ್ಲಿರುವ ನೀರುನಾಯಿಗಳನ್ನು ಸಂರಕ್ಷಿಸಲು ಮುಂದಾಗಬೇಕಿದೆ.
- ಮಾಲತೇಶ ಅಂಗೂರ, ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ