

ಹಾವೇರಿ: ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋಳಿ ಶೀತ ಜ್ವರ ಪ್ರಕರಣಗಳು ಕಂಡುಬಂದಿಲ್ಲ, ಆದರೂ ಕೋಳಿ ಶೀತ ಜ್ವರ ನಿಯಂತ್ರಣಕ್ಕೆ ಹಾಗೂ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಕೋಳಿ ಫಾರ್ಮ್‌ಗಳ ಮೇಲೆ ನಿಗಾ ವಹಿಸಬೇಕು ಎಂದು ಪಶು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೋಳಿ ಶೀತ ಜ್ವರ ಕುರಿತು ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಶು ವೈದ್ಯಾಧಿಕಾರಿಗಳು ಪ್ರತಿದಿನ ಕೋಳಿ ಫಾರ್ಮ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೋಳಿಗಳು ಅಕಾಲಿಕ ಮರಣ ಹೊಂದಿದರೆ ಕೂಡಲೇ ಪಶು ಸಂಗೋಪನೆ ಇಲಾಖೆಗೆ ಮಾಹಿತಿ ನೀಡಲು ಕೋಳಿ ಫಾರ್ಮ್ ಮಾಲೀಕರಿಗೆ ತಿಳಿಸಬೇಕು ಎಂದು ಸೂಚಿಸಿದರು.
ಹೊರ ಜಿಲ್ಲೆಗೆ ಹಾಗೂ ಹೊರ ರಾಜ್ಯಗಳಿಂದ ಬರುವ ಕೋಳಿ ಮೊಟ್ಟೆ ಹಾಗೂ ಕೋಳಿ ಮರಿಗಳ ವಾಹನಗಳ ಮಾಹಿತಿಯನ್ನು ಪಶು ಸಂಗೋಪನಾ ಇಲಾಖೆ ನೀಡಬೇಕು ಎಂದು ಪ್ರಾದೇಶಿಕ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ ಇಲಾಖೆಯ ಡಾ.ಜಗದೀಶ ಪಾಟೀಲ ಮಾತನಾಡಿ, ಕೋಳಿ ಶೀತ ಜ್ವರ ವೈರಲ್‌ನಿಂದ ಹರಡುವುದರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಸಂಶಯಾಸ್ಪದ ಪ್ರಕರಣಗಳ ಪತ್ತೆಗೆ ಆರೋಗ್ಯ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪಿಪಿಇ ಕಿಟ್, ಮಾಸ್ಕ್, ಅಗತ್ಯ ಔಷಧ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಕಿರಣ ಕೊಪ್ಪದ, ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆಗಳು ಅಧಿಕಾರಿಗಳು ಉಪಸ್ಥಿತರಿದ್ದರು.
ಮರಣೋತ್ತರ ಪರೀಕ್ಷೆ:
ಅರಣ್ಯ ಪ್ರದೇಶದಲ್ಲಿ ಹಕ್ಕಿಗಳು ಮರಣ ಹೊಂದಿರೆ ಕೂಡಲೇ ಹತ್ತಿರ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮರಣಹೊಂದಿದ ಹಕ್ಕಿಗಳ ಮರಣೋತ್ತರ ಪರೀಕ್ಷೆಗೆ ಕಳುಹಿಸಬೇಕು ಹಾಗೂ ಮರಣ ಹೊಂದಿದ ಹಕ್ಕಿಗಳ ವಿಲೇವಾರಿ ಮಾರ್ಗಸೂಚಿ ಅನುಸಾರ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಾಗೃತಿ ಮೂಡಿಸಿ:
ಕೋಳಿ ಶೀತ ಜ್ವರದ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳ, ಹಸಿ ಮಾಂಸ ಹಾಗೂ ಹಸಿ ಮೊಟ್ಟೆ ಉಪಯೋಗಿಸದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಆರೋಗ್ಯ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಸ್ಯಾನಿಟೈಜೇಷನ್ ಮಾಡಿ:
ಬೇರೆ ಬೇರೆ ಪ್ರದೇಶಗಳಿಂದ ಬರುವ ಮೊಟ್ಟೆ ಅಥವಾ ಕೋಳಿ ವಾಹನಗಳನ್ನು ಸ್ಯಾನಿಟೈಜೇಷನ್ ಮಾಡಬೇಕು. ಕೋಳಿ ಫಾರ್ಮ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಮಾಲೀಕರು ಅಗತ್ಯ ಸುರಕ್ಷಾ ಕವಚನಗಳನ್ನು ಉಪಯೋಗಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಆರ್‌ಆರ್ ತಂಡ ರಚನೆ
ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎಸ್.ವಿ ಸಂತಿ ಮಾತನಾಡಿ, ಬ್ಯಾಡಗಿ ತಾಲೂಕಿನಲ್ಲಿ 17, ಹಾನಗಲ್ಲ- 5, ಹಾವೇರಿ- 20, ಹಿರೇಕೆರೂರ- 11, ರಾಣೆಬೆನ್ನೂರ- 86, ರಟ್ಟಿಹಳ್ಳಿ ಹಾಗೂ ಸವಣೂರ ತಾಲೂಕಿನಲ್ಲಿ ತಲಾ 13 ಮತ್ತು ಶಿಗ್ಗಾಂವಿ ತಾಲೂಕಿನಲ್ಲಿ 14 ಸೇರಿ ಒಟ್ಟು 179 ಕೋಳಿ ಫಾರ್ಮ್‌ಗಳಿವೆ. ಕೋಳಿ ಶೀತ ಜ್ವರ ನಿಯಂತ್ರಣಕ್ಕೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜತೆಗೆ ತಾಲೂಕು ಮಟ್ಟದಲ್ಲಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ನಾಲ್ಕು ಜನರ ರ‌್ಯಾಪಿಡ್ ರೆಸ್ಪಾನ್ ಟೀಂ( ಆರ್‌ಆರ್‌ಟಿ) ತಂಡವನ್ನು ಎಲ್ಲ ತಾಲೂಕುಗಳಿಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.