ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಕನ್ನಡಿಗರಿಗೆ ಸಂಕಷ್ಟ; ಉತ್ತರಾಖಂಡದ ಜೋಶಿ ಮಠದ ಬಳಿ ಗುಡ್ಡ ಕುಸಿತ

12 HVR 4
Published on

ಹಾವೇರಿ: ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಹಾವೇರಿ ಜಿಲ್ಲೆಯ ಏಳು ಪ್ರವಾಸಿಗರು ಉತ್ತರಾಖಂಡದಲ್ಲಿ ಗುಡ್ಡ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದು, ವಾಪಸ್ ಬರಲಾಗದೇ ಪರದಾಡುತ್ತಿದ್ದಾರೆ. ಹಿರೇಕೆರೂರ ತಾಲೂಕಿನ ಚಿಕ್ಕೆರೂರ ಗ್ರಾಮದ ಮೂವರು ಹಾಗೂ ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದ ನಾಲ್ವರು ಸೇರಿ ಚಾರ್‌ಧಾಮ್ ಯಾತ್ರೆಗೆ ತೆರಳಿದ್ದರು. ಶ್ರೀಧರ ಹೊಳಲ್ಕೇರಿ, ಶಾಂತಾ ಹೊಳಲ್ಕೇರಿ, ಅಶೋಕ ಎಸ್.ವಿ.,ರಾಜೇಶ್ವರಿ ಪಂಪನ್, ರಾಹುಲ ಪಂಪನ್ ಹಾಗೂ ಇತರರು ತಂಡದಲ್ಲಿದ್ದರು.
ಬದರಿನಾಥ ದರ್ಶನ ಮುಗಿಸಿ ವಾಪಸ್ ಬರುವಾಗ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಜೋಶಿ ಮಠದ ಬಳಿ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಅವರು ವಾಪಸ್ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶುಕ್ರವಾರ ವಿಮಾನಯಾನದ ಟಿಕೆಟ್ ಕೂಡ ಬುಕ್ ಮಾಡಿಕೊಂಡಿದ್ದರು. ಆದರೆ, ದಾರಿ ಇಲ್ಲದೇ ಪರದಾಡುವಂತಾಗಿದೆ ಎಂದು ಪ್ರವಾಸಿಗರು ಹೇಳಿಕೊಂಡಿದ್ದಾರೆ.
ಸುರಕ್ಷಿತವಾಗಿದ್ದಾರೆ
ಚಮೋಲಿ ಜಿಲ್ಲೆಯ ಸ್ಥಳೀಯ ಆಡಳಿತ ಹಾಗೂ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಜಿಲ್ಲೆಯ ಏಳು ಜನರಿಗೆ ಹತ್ತಿರದ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಸದ್ಯ ಅವರು ಸುರಕ್ಷಿತವಾಗಿದ್ದಾರೆ. ಒಂದೆರೆಡು ದಿನಗಳಲ್ಲಿ ರಸ್ತೆ ಮಾರ್ಗದಲ್ಲಿ ಅಡ್ಡಲಾಗಿರುವ ಅವಶೇಷಗಳನ್ನು ತೆರವುಗೊಳಿಸುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net