ಚಾರ್‌ಧಾಮ್ ಯಾತ್ರೆಯಲ್ಲಿ ಸಿಲುಕಿದ್ದವರು ಇಂದು ದೆಹಲಿಗೆ; ಸ್ಪಂದಿಸಿದ ಜಿಲ್ಲಾಡಳಿತ

13 HVR 8
Published on

ಹಾವೇರಿ: ಚಾರ್‌ಧಾಮ್ ಯಾತ್ರೆ ವೇಳೆ ಭೂ ಕುಸಿತದಿಂದ ಅರ್ಧದಲ್ಲೇ ಸಿಲುಕಿಕೊಂಡಿದ್ದ ಹಾವೇರಿಯ ಜಿಲ್ಲೆಯ ಏಳು ಪ್ರಯಾಣಿಕರು ಸುರಕ್ಷಿತವಾಗಿದ್ದು, ಎಲ್ಲರೂ ಇದೀಗ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಹಾನಗಲ್ಲ ತಾಲ್ಲೂಕಿನ ತಿಳವಳ್ಳಿಯ ಅಶೋಕ ವೆಂಕಪ್ಪ ಶಿವಮೊಗ್ಗಿ (61), ಭಾರತಿ ಅಶೋಕ ಶಿವಮೊಗ್ಗಿ (55), ಹಿರೇಕೆರೂರ ತಾಲೂಕಿನ ಚಿಕ್ಕೇರೂರು ಗ್ರಾಮದ ಶ್ರೀಧರ ಮಂಜಪ್ಪ ಹೊಳಲಕೇರಿ (62), ಶಾಂತಾ ಹೊಳಲಕೇರಿ (57), ವೆಂಕಟೇಶ (62), ರಾಜೇಶ್ವರಿ (60) ಹಾಗೂ ರಾಹುಲ (35) ಜೂನ್ 29ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇದಾರನಾಥ ಯಾತ್ರೆಗೆ ಹೋಗಿದ್ದರು.
ಉತ್ತರಾಖಂಡದ ಜೋಶಿಮಠ ಬಳಿ ಭಾರಿ ಮಳೆಯಿಂದಾಗಿ ಐದಾರು ದಿನಗಳ ಹಿಂದೆ ಭೂಕುಸಿತ ಉಂಟಾಗಿ, ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಏಳು ಮಂದಿಯೂ ಮಾರ್ಗಮಧ್ಯೆಯೇ ಸಿಲುಕಿಕೊಂಡಿದ್ದರು. ಭೂಕುಸಿತ ಸ್ಥಳದಲ್ಲಿದ್ದ ಮಣ್ಣನ್ನು ತೆರವು ಮಾಡಿದ್ದ ಸ್ಥಳೀಯ ಆಡಳಿತ ಮಂಡಳಿ ಸಿಬ್ಬಂದಿ, ವಿಶೇಷ ಕಾಳಜಿ ಮೂಲಕ ದೆಹಲಿಯತ್ತ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದಾರೆ.
ಭಾನುವಾರ ದೆಹಲಿಗೆ ಆಗಮಿಸಲಿದ್ದು, ಜು.16ರಂದು ದೆಹಲಿಯಿಂದ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಹಾವೇರಿಗೆ ಬರಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿ ಹಾವೇರಿಗೆ ಬರಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಸ್ಪಂದಿಸಿದ ಜಿಲ್ಲಾಡಳಿತ
ಪ್ರಯಾಣಿಕರು ವಿಡಿಯೋ ಮೂಲಕ ರಕ್ಷಣೆ ನೀಡುವಂತೆ ಜಿಲ್ಲಾಡಳಿತವನ್ನು ಕೋರಿಕೊಂಡಿದ್ದರು. ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸ್ಪಂದಿಸಿದ್ದರು.
ಹೃಷಿಕೇಶದಲ್ಲಿದ್ದೇವೆ
ಎಲ್ಲರೂ ಸುರಕ್ಷಿತವಾಗಿದ್ದಾರೆ. ಭೂ ಕುಸಿತದ ಸ್ಥಳದಿಂದ ಪಾರಾಗಿ ಸುರಕ್ಷಿತವಾಗಿ ಬೇರೆ ಕಡೆ ಬಂದಿದ್ದೇವೆ. ಎಲ್ಲರೂ ಸದ್ಯ ಹೃಷಿಕೇಶದಲ್ಲಿ ಇದ್ದೇವೆ. ನಿನ್ನೆ ಔಷಧಿ ಕೊರತೆ ಇತ್ತು. ಈಗ, ಎಲ್ಲ ಔಷಧಿ ಲಭ್ಯವಾಗಿದೆ. ಜು.16ರಂದು ಹಾವೇರಿಗೆ ಬರುತ್ತೇವೆ ಎಂದು ಯಾತ್ರಿಕ ಶ್ರೀಧರ ಹೊಳಲಕೇರಿ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net