

ಹಾವೇರಿ: ಇಲ್ಲಿನ ಪಿಬಿ ರಸ್ತೆಯ ರೈತ ಸಂಪರ್ಕ ಕೇಂದ್ರದ ಹಿಂಭಾಗದಲ್ಲಿರುವ ಡಾ.ಮಹದೇವ ಬಣಕಾರ ಕೇಂದ್ರ ಗ್ರಂಥಾಲಯ (ಸೆಂಟ್ರಲ್ ಲೈಬ್ರರಿ)ಕ್ಕೆ ಜನರೇಟರ್ ವ್ಯವಸ್ಥೆ ಮಾಡುವಂತೆ ಗ್ರಂಥಾಲಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಮುಖ್ಯ ಗ್ರಂಥಪಾಲಕಿ ಸುಮಾ ಕೋಡಿಹಳ್ಳಿ ತಿಳಿಸಿದ್ದಾರೆ.
ಗ್ರಂಥಾಲಯದಲ್ಲಿ ಕರೆಂಟ್ ಹೋದರೆ ವಿದ್ಯಾರ್ಥಿಗಳು ಕತ್ತಲಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆ ಇದೆ. ವೈಫೈ ಸೌಲಭ್ಯ ಮರೀಚಿಕೆಯಾಗಿದೆ. ಸೂಕ್ತ ಶೌಚಗೃಹ ವ್ಯವಸ್ಥೆ ಇಲ್ಲ. ಈ ಎಲ್ಲ ಸಮಸ್ಯೆಗಳ ಕುರಿತು ಆ.13ರಂದು ‘ಕಳೆಗುಂದುತಿದೆ ಹಾವೇರಿ ಗ್ರಂಥಾಲಯ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಫೋಕಸ್ ಸ್ಟೋರಿ ಪ್ರಕಟವಾಗಿತ್ತು.
ವರದಿ ಹಿನ್ನೆಲೆಯಲ್ಲಿ ಜನರೇಟರ್ ಸೌಲಭ್ಯಕ್ಕಾಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ವೈಫೈ, ಡಿಜಿಟಲ್ ಲೈಬ್ರರಿ, ಶೌಚಗೃಹ ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.