

ಕೇಶವಮೂರ್ತಿ ವಿ.ಬಿ. ಹಾವೇರಿ
ಚುನಾವಣೆ ಕಾವು ಏರುತ್ತಿದ್ದಂತೆ ಏಲಕ್ಕಿ ನಗರಿ ಹಾವೇರಿ ಸೇರಿದಂತೆ ಜಿಲ್ಲೆಯಾದ್ಯಂತ ಬಿಸಿಲಿನ ಕಾವು ಕೂಡ ಏರುತ್ತಲೇ ಇದೆ. ಈ ರಣಬಿಸಿಲು ಚುನಾವಣಾ ಪ್ರಚಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಕಾರ್ಯಕರ್ತರು ಸೆಕೆಯ ಬವಣೆಗೆ ಬೆಂಡಾಗುತ್ತಿದ್ದಾರೆ.
ನಾಮಪತ್ರ ಸಲ್ಲಿಕೆ, ವಾಪಸ್ ಪಡೆಯುವ ಭರಾಟೆ ಮುಕ್ತಾಯದ ಬೆನ್ನಲ್ಲೇ ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಕಾರ್ಯಕರ್ತರ ಪಡೆ ಕಟ್ಟಿಕೊಂಡು ವಿವಿಧ ಬಡಾವಣೆಗಳು, ವಾರ್ಡುಗಳು ಹಾಗೂ ಹಳ್ಳಿಗಳತ್ತ ಪ್ರಚಾರಕ್ಕೆ ಇಳಿದಿದ್ದಾರೆ. ಇದರ ಮಧ್ಯದಲ್ಲಿ ಏರುತ್ತಿರುವ ಬಿಸಿಲಿನ ತಾಪಕ್ಕೆ ಎಲ್ಲರ ಮುಖ ಬಾಡುತ್ತಿವೆ. ಅತಿಯಾದ ಸೆಕೆಗೆ ಬಟ್ಟೆಗಳು ಒದ್ದೆಯಾಗಿ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಅತಿಯಾದ ಬಿಸಿಲಿನಿಂದ ಜಿಲ್ಲೆಯ ಹಲವೆಡೆ ನೀರಿನ ಕೊರತೆ ಶುರುವಾಗಿರುವ ನಡುವೆ ಬಿಸಿಲಿನ ದಗೆಗೆ ಜನ ಬಸವಳಿದಿದ್ದಾರೆ. ಚುನಾವಣೆ ಪ್ರಚಾರ ಕೈಗೊಳ್ಳುತ್ತಿರುವ ವಿವಿಧ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಕೆಲಸವಾಗಿ ಪರಿಣಮಿಸಿದೆ. ಹರಸಾಹಸ ಮಾಡಿ ನೂರಾರು ಕಾರ್ಯಕರ್ತರನ್ನು ರ‌್ಯಾಲಿಗಳಿಗೆ ಕರೆತರಲಾದರೂ ಅವರನ್ನು ಕದಲದಂತೆ ಹಿಡಿಯುವುದು ಕಷ್ಟಕರವಾಗಿದೆ.
ಇದೇ ಕಾರಣಕ್ಕೆ ಅಭ್ಯರ್ಥಿಗಳು ಬೆಳ್ಳಂಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚು ಮನೆ ಮನೆ ಪ್ರಚಾರ ಹಮ್ಮಿಕೊಂಡಿದ್ದಾರೆ. ಸಭೆ, ಸಮಾವೇಶಗಳನ್ನು ಸಾದ್ಯವಾದಷ್ಟು ಸಂಜೆ ವೇಳೆಗೆ ಆಯೋಜಿಸುತ್ತಿದ್ದಾರೆ. ಮಧ್ಯಾಹ್ನ ಸುಡು ಬಿಸಿಲಲ್ಲೂ ತುಸು ವಿಶ್ರಾಂತಿಯ ಪಡೆಯದೇ ಪ್ರಚಾರದ ಮೊರೆ ಹೋಗುತ್ತಿದ್ದಾರೆ. ಆದರೆ, ಈ ವೇಳೆಯಲ್ಲಿ ಕಾರ್ಯಕರ್ತರ ಸಂಖ್ಯೆ ವಿರಳವಾಗಿರುವುದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರ ಪ್ರಚಾರದಲ್ಲಿ ಕಂಡು ಬರುತ್ತಿದೆ.
ಇಂತಹ ಉರಿ ಬಿಸಿಲಿನಲ್ಲೂ ಕೆಲವರ ಪ್ರಚಾರದ ರಣೋತ್ಸಾಹಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ. ಬಂದಷ್ಟು ಜನ ಬರಲಿ ನಾವು ಪ್ರಚಾರ ಕಾರ್ಯ ಮುಂದುವರಿಸುತ್ತೇವೆ ಎಂದು ಮುನ್ನುಗ್ಗುತ್ತಿದ್ದಾರೆ. ಬಾಕ್ಸ್
38 ಡಿಗ್ರಿ ಸೆಲ್ಸಿಯಸ್
ಜಿಲ್ಲೆಯಲ್ಲಿ ಸದ್ಯ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ವಾರ ಜಿಲ್ಲೆಯ ಕೆಲವೆಡೆ ಮಳೆ ಸುರಿದ ಪರಿಣಾಮ ಕೆಲಕಾಲ ತಂಪಾಗಿತ್ತಾದರೂ ರಣಬಿಸಿಲಿಗೆ ಮತ್ತದೇ ಸೆಕೆಯ ವಾತಾವರಣ ಸೃಷ್ಟಿಯಾಗಿದೆ. ಬಾಕ್ಸ್
ಟೊಪ್ಪಿಗೆ, ಎಳನೀರಿಗೆ ಬೇಡಿಕೆ
ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಜನ ಎಳನೀರು, ಮಜ್ಜಿಗೆ, ಕಲ್ಲಂಗಡಿ ಹಣ್ಣು, ಜ್ಯೂಸ್, ಐಸ್ ಕ್ರೀಮ್, ಕನ್ನಡಕ, ಟೊಪ್ಪಿಗೆಗಳ ಮೊರೆ ಹೋಗುತ್ತಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಪಕ್ಷದ ಧ್ವಜಕ್ಕಿಂತ ಮುಖ್ಯವಾಗಿ ಕಾರ್ಯಕರ್ತರಲ್ಲಿ ಟೊಪ್ಪಿಗೆಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.