ಕಾಗಿನೆಲೆಯಲ್ಲಿ ಸಾಗವಾನಿ ಅಕ್ರಮ ಸಾಗಣೆ ಯತ್ನ; ಅರಣ್ಯ ಇಲಾಖೆ ಅಧಿಕಾರಿಗಳಿಂದ ಕರ್ತವ್ಯ ಲೋಪ ಆರೋಪ

Published on

ಹಾವೇರಿ: ಬ್ಯಾಡಗಿ ತಾಲೂಕು ಕಾಗಿನೆಲೆ ಗ್ರಾಮದ ಸಾಮಿಲ್‌ವೊಂದರಲ್ಲಿ ಅನುಮತಿ ಪಡೆಯದೇ ಸಾಗವಾನಿ ಬಡ್ಡಿಗಳ ಸಾಗಣೆ ಕೃತ್ಯ ನಡೆದಿದ್ದು, ಈ ಪ್ರಕರಣ ಮುಚ್ಚಿ ಹಾಕಲು ಅರಣ್ಯ ಇಲಾಖೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಸಾಮಿಲ್‌ವೊಂದರಲ್ಲಿ ಡಿ.26ರಂದು ಟಾಟಾ ಏಸ್‌ನಲ್ಲಿ ಬಂದಿದ್ದ ಬೃಹತ್ ಸಾಗವಾನಿ, ಇತರ ಗಿಡಗಳ ಬಡ್ಡಿಗಳನ್ನು ತುಂಡರಿಸಲಾಗುತ್ತಿತ್ತು. ಈ ಕುರಿತು ಬೆಳಗ್ಗೆ 6 ಗಂಟೆ ಸುಮಾರು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಆದರೆ, ಅಧಿಕಾರಿಗಳು 8 ಗಂಟೆ ಬಳಿಕ ಸಾಮಿಲ್‌ಗೆ ಹೋಗಿ ದಾಳಿ ನಡೆಸಿ ಸಾಗವಾನಿ ವಶಪಡಿಸಿಕೊಂಡಿದ್ದರು.

ಆದರೆ, ಈ ಪ್ರಕರಣ ಮುಚ್ಚಿಹಾಕುವ ನಿಟ್ಟಿನಲ್ಲಿ ಕಥೆ ಕಟ್ಟಿದ್ದಾರೆ. ಸಾಮಿಲ್‌ನಲ್ಲಿ ಏನೂ ಸಿಕ್ಕಿಲ್ಲ, ಆಟೋದಲ್ಲಿ ಸಾಗಿಸುತ್ತಿದ್ದ ಕೆಲ ಸಾಗವಾನಿ ಬಡ್ಡಿಗಳು ಸಿಕ್ಕಿವೆ. ಆಟೋ ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ನಾನು ಸ್ಥಳಕ್ಕೆ ಹೋಗಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಮಾಹಿತಿ ಬಂದಿತ್ತು. ನಮ್ಮ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಹೋದಾಗ ಆಟೋದಲ್ಲಿ ಸಾಗವಾನಿ ಬಡ್ಡಿಗಳು ಸಿಕ್ಕಿವೆ. ಆಟೋ ಚಾಲಕ ಪರಾರಿಯಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬ್ಯಾಡಗಿ ಆರ್‌ಎಫ್‌ಒ ಗಿರಿಧರ ಜಿ.ಕೆ. ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಈ ಆರೋಪದ ಕುರಿತು ಡಿಸಿಎಫ್ ಅವರು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net