ಕಳ್ಳರ ಪತ್ತೆಗೆ ಬಲೆ ಬೀಸಿದ ಖಾಕಿ ಪಡೆ; ಶಾಸಕರ ಪಕ್ಕದ ಮನೆಯಲ್ಲಿ ಕಳವು; ಆತಂಕದಲ್ಲಿ ಬ್ಯಾಡಗಿ ಪಟ್ಟಣದ ಜನತೆ

18 HVR 5
Published on

ಬ್ಯಾಡಗಿ: ಪಟ್ಟಣದ ಸಂಗಮೇಶ್ವರ ನಗರದಲ್ಲಿ ಭಾನುವಾರ ಹಾಡಹಗಲೇ ಎರಡು ಮನೆಗಳ ಬೀಗ ಮುರಿದು ಸುಮಾರು 60 ತೊಲೆ ಚಿನ್ನವನ್ನು ಕಳವು ಮಾಡಿದ ಘಟನೆ ಪಟ್ಟಣದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಶಾಸಕರ ಮನೆಯ ಪಕ್ಕದಲ್ಲೇ ಕಳ್ಳತನ ನಡೆದಿರುವುದು ಜನರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಪಟ್ಟಣದ ವ್ಯಾಪಾರಸ್ಥರಾದ ಮುತ್ತಣ್ಣ ಕೆರೂಡಿ ಹಾಗೂ ತಿರಕಪ್ಪ ಬೆಳಕೇರಿ ಎಂಬುವರ 2 ಪ್ರತ್ಯೇಕ ಮನೆಗಳಲ್ಲಿ ಕಳ್ಳರು ಸುಮಾರು 35 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ದೋಚಿದ್ದಾರೆ.
ಶಾಸಕ ಬಸವರಾಜ ಶಿವಣ್ಣನವರ ಸಂಗಮೇಶ್ವರ ನಗರದ ಮನೆಯ ಪಕ್ಕದ ಮನೆಯಲ್ಲಿ ಹಗಲಲ್ಲೇ ಕಳ್ಳತನ ನಡೆದಿದೆ. ಶಾಸಕರ ಮನೆಯ ಕೂಗಳತೆಯ ದೂರದಲ್ಲಿ ಎರಡೂ ಮನೆ ಒಂದಕ್ಕೊಂದು ಎದುರಾಗಿವೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ಕಾರಿನಲ್ಲಿ ಓಡಾಡಿದ ಕಳ್ಳರು
ಮುತ್ತಣ್ಣ ಕೆರೂಡಿ ಉಜನಿ ಗ್ರಾಮಕ್ಕೆ ಕುಟುಂಬಸಮೇತರಾಗಿ ತೆರಳಿದ್ದಾಗ ಮದ್ಯಾಹ್ನ ಕಳ್ಳರ ತಂಡ ಕಾರಿನಲ್ಲಿ ಬಂದಿಳಿದಿದೆ. ಮನೆಯ ಹಿಂಬಾಗಿಲನ್ನು ಮುರಿದು 45 ಗ್ರಾಂ ಚಿನ್ನದ ಒಡವೆಗಳನ್ನು ಕದ್ದಿದ್ದಾರೆ. ಇದೇ ಮನೆಯ ಎದುರಿನ ಕ್ರಷರ್ ಮಾಲೀಕ ತಿರಕಪ್ಪ ಬೆಳಕೇರಿ, ಛತ್ರ ಗ್ರಾಮಕ್ಕೆ ತೆರಳಿದಾಗ ಮನೆಯ ಮುಂದಿನ ಬಾಗಿಲು ಮುರಿದು 15 ತೊಲೆ ಚಿನ್ನ ಕಳವು ಮಾಡಿದ್ದಾರೆ. ಹಲವು ದಿನಗಳಿಂದ ಹೊಂಚು ಹಾಕಿ ಕಳ್ಳತನ ಮಾಡಿರಬಹುದು ಎಂಬ ಅನುಮಾನ ಮೂಡಿದೆ. ಈ ಕಾರು ಹಗಲು-ರಾತ್ರಿ ಬಸವೇಶ್ವರನಗರ ಹಾಗೂ ಸರ್ಕಲ್‌ನಲ್ಲಿ ಸಾಕಷ್ಟು ಬಾರಿ ಓಡಾಡಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net