

ಹಾವೇರಿ: ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದ ಹಂಸಭಾವಿ 105 ಸರ್ವೇ ಜಾಗದಲ್ಲಿ ವಾಸವಿರುವ ಅಲೆಮಾರಿ ಜನಾಂಗದ ಲಕ್ಷ್ಮೀ ನಾಗಪ್ಪ ದುರಮುರಗೇರ ದಂತಿಯ 2 ವರ್ಷದ ಮಗು ಪೂಜಾ ನಾಗಪ್ಪ ದುರಮುರಗೇರ ಬುಧವಾರ ಗುಂಡಿಯಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದು, ಗುರುವಾರ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ, ಮೃತ ಮಗುವಿನ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
105 ಸರ್ವೇನಲ್ಲಿ ವಾಸವಿರುವ ಅಲೆಮಾರಿ ಸಮುದಾಯದವರಿಗೆ ಸೂಕ್ತ ವಾಸ ಸ್ಥಳದ ವ್ಯವಸ್ಥೆ ಮಾಡಿಕೊಡಬೇಕು. ಸರ್ವೇ 105 ಕಂದಾಯ ಗ್ರಾಮದಡಿ ಬರುವುದರ ಬಗ್ಗೆ ಪರಿಶೀಲಿಸಿಕೊಂಡು ವಾಸ ಸ್ಥಳ ಕಲ್ಪಿಸಿಕೊಡಲಾಗುವುದು. ಸಮುದಾಯದ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್, ರೇಷನ್ ಕಾರ್ಡ್ ಹಾಗೂ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳು ಇವರಿಗೆ ತಲುಪಬೇಕು. ಕುಡಿಯುವ ನೀರಿಗಾಗಿ ಬೋರವೆಲ್ ಕೊರೆಸಿ ಪಕ್ಕದಲ್ಲಿರುವ ಕೆರೆಯನ್ನು ಸರ್ವೇ ಮಾಡಿಸಿ ತಂತಿ ಬೇಲಿ ಹಾಕಬೇಕು ಹಾಗೂ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬ್ಯಾಡಗಿ ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ, ಪಿಡಿಒ, ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನಿರಿಕ್ಷಕರು, ಇತರರಿದ್ದರು.