ರೈತರಿಗಾಗಿ 'ಕನ್ಯಾಭಾಗ್ಯ' ಯೋಜನೆ ಜಾರಿಗೊಳಿಸಿ; ಸಿಎಂ ಸಿದ್ದರಾಮಯ್ಯಗೆ ವಿಶಿಷ್ಟ ರೀತಿಯ ಪತ್ರ ಬರೆದ ರೈತರ ಮಕ್ಕಳು

20 HVR 5
Published on

ಹಾವೇರಿ: ಮುಂಗಾರು ಪೂರ್ವ ಮಳೆ ಕೈಕೊಟ್ಟ ಪರಿಣಾಮ ಸಂಕಷ್ಟಕ್ಕೀಡಾಗಿರುವ ಅನ್ನದಾತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಇದರಿಂದ ರೈತರ ಮಕ್ಕಳಿಗೆ ಮದುವೆ ಯೋಗ ಕೂಡಿ ಬರುತ್ತಿಲ್ಲ. ಇದರಿಂದ ಬೇಸತ್ತ ಬ್ಯಾಡಗಿ ತಾಲೂಕಿನ ವಿವಿಧ ಗ್ರಾಮಗಳ ರೈತರ ಮಕ್ಕಳು, 'ಕನ್ಯಾ ಭಾಗ್ಯ' ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶಿಷ್ಟ ರೀತಿಯ ಪತ್ರ ಚಳವಳಿ ಆರಂಭಿಸಿದ್ದಾರೆ.
ಸಾಲ, ಸೂಲ ಮಾಡಿ ಬೆಳೆದ ಬೆಳೆ ಕೈಕೊಟ್ಟ ಪರಿಣಾಮ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿರುವ ರೈತ ಸಮುದಾಯದವರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಚೆನ್ನಾಗಿ ಬೆಳೆ ಬೆಳೆದು ಶ್ರೀಮಂತರಾಗಿದ್ದರೂ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವ ಉದಾಹರಣೆಗಳಿವೆ. ಮದುವೆಯಾಗದ ಪರಿಣಾಮ ಯುವಕರೂ ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ.
ಈ ಸಮಸ್ಯೆಯ ಗಂಭೀರತೆಯನ್ನು ಅರಿತುಕೊಂಡು ತಮ್ಮ ಗ್ಯಾರಂಟಿ ಯೋಜನೆಗಳಂತೆ ಯುವ ರೈತರಿಗಾಗಿ 'ಕನ್ಯಾ ಭಾಗ್ಯ' ಯೋಜನೆ ಜಾರಿಗೊಳಿಸಬೇಕು. ರೈತನನ್ನು ಮದುವೆಯಾದ ಯುವತಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದು, ಉದ್ಯೋಗದಲ್ಲಿ ಮೀಸಲಾತಿ, ಮಾಸಿಕ ಸಹಾಯಧನ ನೀಡುವ ಯೋಜನೆ ಪ್ರಾರಂಭಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಪತ್ರದ ವಿಚಾರ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net