81 ಜನರ ಬಂಧನ, ನಾಲ್ಕು ಕೇಸ್ ದಾಖಲು; 38 ರೈತರು ಆಂಧ್ರ, ತೆಲಂಗಾಣದವರು; ಬಳ್ಳಾರಿಯವರು 25, ಹಾವೇರಿಯವರು ಒಬ್ಬರೂ ಇಲ್ಲ

12 Byadagi Galate 3
Published on

ಹಾವೇರಿ: ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಾಂಧಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಡಗಿ ಪೊಲೀಸರು ಒಟ್ಟು ನಾಲ್ಕು ಪ್ರಕರಣ ದಾಖಲಿಸಿಕೊಂಡು, 81 ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಬಹುತೇಕರು ಆಂಧ್ರ, ತೆಲಂಗಾಣ, ಬಳ್ಳಾರಿಯವರಿದ್ದು, ಹಾವೇರಿ ಜಿಲ್ಲೆಯ ಒಬ್ಬರೂ ಇಲ್ಲ ಎಂಬುದು ಗಮನಾರ್ಹ.
ಬ್ಯಾಡಗಿ ಪೊಲೀಸರು ಒಂದು ಪ್ರಕರಣ ದಾಖಲಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಒಂದು, ಗಾಯಾಳು ಪತ್ರಕರ್ತ ಮಂಜುನಾಥ ಭೊವಿ ಒಂದು ಹಾಗೂ ಎಪಿಎಂಸಿ ಸಿಬ್ಬಂದಿ ಒಂದು ಪ್ರಕರಣ ದಾಖಲಿಸಿದ್ದಾರೆ. ಬಂಧಿತ 81 ಆರೋಪಿತರಲ್ಲಿ 38 ಆಂಧ್ರ, ತೆಲಂಗಾಣ, 25 ಬಳ್ಳಾರಿಯವರು ಹಾಗೂ ಇತರ ಜಿಲ್ಲೆಯವರಿದ್ದಾರೆ. ಬಂಧಿತರಲ್ಲಿ ಬಹುತೇಕರು ರೈತರಿದ್ದು, ಗೂಂಡಾ, ರೌಡಿಶೀಟರ್ ಹಿನ್ನೆಲೆಯವರು ಈವರೆಗೆ ಕಂಡುಬಂದಿಲ್ಲ.
ಘಟನೆಯಲ್ಲಿ ಮೂವರು ಪೊಲೀಸರು ಹಾಗೂ ಓರ್ವ ಕ್ಯಾಮರಾಮನ್ ಗಾಯಗೊಂಡಿದ್ದು, ಬ್ಯಾಡಗಿ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಎಂಟು ವಾಹನಗಳಿಗೆ ಹಾನಿ ಉಂಟಾಗಿದೆ. ಅದರಲ್ಲಿ ಎಪಿಎಂಸಿಗೆ ಸೇರಿದ 5 ಕಾರು, ಖಾಸಗಿ ಎರಡು ಕಾರುಗಳು, ಒಂದು ಅಗ್ನಿಶಾಮಕ ವಾಹನ, ನಾಲ್ಕು ಬೈಕ್ ಬೆಂಕಿಗೆ ಆಹುತಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ‘ವಿಜಯವಾಣಿ’ಗೆ ತಿಳಿಸಿದರು.
ಸಾವಿರಕ್ಕೂ ಅಧಿಕ ಆರೋಪಿತರು
ನಾಲ್ಕು ಪ್ರಕರಣದಲ್ಲಿ ಸಾವಿರಕ್ಕೂ ಅಧಿಕ ಜನರ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ 81 ಆರೋಪಿತರನ್ನು ಬಂಧಿಸಲ್ಪಟ್ಟಿದ್ದು, ವಿಡಿಯೋ ದೃಶ್ಯಾವಳಿ, ಮತ್ತಿತರ ಮೂಲಗಳಿಂದ ಉಳಿದವರನ್ನು ಬಂಧಿಸಲಾಗುವುದು ಎಂದು ಎಸ್‌ಪಿ ಅಂಶುಕುಮಾರ ತಿಳಿಸಿದ್ದಾರೆ.

ಕ್ಯಾಮರಾಮನ್ ಮಂಜುಗೆ ಚಿಕಿತ್ಸೆ
ವಿಸ್ತಾರ ಸುದ್ದಿವಾಹಿನಿಯ ಕ್ಯಾಮರಾಮನ್ ಮಂಜುನಾಥ ಬೋವಿ ತಲೆ, ಬೆನ್ನು ಹಾಗೂ ಕೈಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಜು ಚಿತ್ರೀಕರಣ ಮಾಡುವ ವೇಳೆ ತಲೆಗೆ ಕಲ್ಲಿನಿಂದ ಒಡೆದಿದ್ದಾರೆ. ಈ ವೇಳೆ ಮೊದಲ ಮಹಡಿಯಿಂದ ಮಂಜು ಕೆಳಗೆ ಬಿದ್ದಿದ್ದಾರೆ. ನಂತರ ಅವರ 2 ಲಕ್ಷ ರೂ. ಮೌಲ್ಯದ ಕ್ಯಾಮರಾ ಕಸಿದುಕೊಂಡು ಕಲ್ಲಿನಿಂದ ಜಜ್ಜಿದ್ದಾರೆ. ಆಸ್ಪತ್ರೆಗೆ ಡಿಸಿ ರಘುನಂದನ ಮೂರ್ತಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಗಾಯಾಳುವಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಕೋಟ್
ಮಂಗಳವಾರ ಮತ್ತೊಮ್ಮೆ ಟೆಂಡರ್ ಮಾಡಲಾಗಿದೆ. ವರ್ತಕರ ಸಭೆ ನಡೆಸಿ ಎಂದಿನಂತೆ ಸೋಮವಾರ ಹಾಗೂ ಗುರುವಾರ ವಾರಕ್ಕೆ ಎರಡು ದಿನ ಕಡ್ಡಾಯವಾಗಿ ಹರಾಜು ಹಾಕಲು ಸೂಚಿಸಲಾಗಿದೆ. ದರ ಇಳಿಕೆಯಾದಲ್ಲಿ ರೈತರಿಗೆ ಸರಿಯಾಗಿ ಮಾಹಿತಿ ನೀಡುವಂತೆ ಸಲಹೆ ಕೊಡಲಾಗಿದೆ. ಹಾನಿ ಪ್ರಮಾಣ ಎಷ್ಟು ? ಅದನ್ನು ಹೇಗೆ ಭರಿಸುವುದು ? ಎಂಬಿತ್ಯಾದಿ ಅಂಶಗಳನ್ನು ಎಪಿಎಂಸಿ ಇಲಾಖೆ ನಿರ್ಧರಿಸಲಿದೆ.
- ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net