ಬ್ಯಾಡಗಿ ಗಲಭೆಯ ಹಾನಿಯನ್ನು ಇಲಾಖೆ ಭರಿಸುತ್ತೆ; ಗತವೈಭವ ಮತ್ತೆ ಮರುಕಳಿಸಲಿದೆ; ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿಕೆ

Byadagi apmc
Published on

ಬ್ಯಾಡಗಿ: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಘಟನೆಯಲ್ಲಿ ಆಗಿರುವ ಹಾನಿಯನ್ನು ಕೃಷಿ ಮಾರುಕಟ್ಟೆ ಇಲಾಖೆಯಿಂದ ಭರಿಸಲಾಗುವುದು. ಬ್ಯಾಡಗಿ ಮಾರುಕಟ್ಟೆಯ ಗತವೈಭವವನ್ನು ಮತ್ತೆ ಮರುಕಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಬುಧವಾರ ಬ್ಯಾಡಗಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಸಾಮಾನ್ಯವಾಗಿ ತಾವು ಬೆಳೆದ ಬೆಳೆಗೆ ತಕ್ಕ ಬೆಲೆ ಬರದೇ ಇದ್ದರೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಮಾಡಬಹುದು. ರೈತರಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎಂಬುದು ಇಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಇದೆ. ದೆಹಲಿಯಲ್ಲಿ ಎಂಎಸ್‌ಪಿ ಜಾರಿಗೆ ತರಲೇಬೇಕು ಎಂದು ರೈತರು ಕೂಗು ಹಾಕುತ್ತಿದ್ದಾರೆ. ಆದರೆ, ಇಂತಹ ಘಟನೆ ಆಗಬಾರದಿತ್ತು ಎಂದರು.
ಸಾಂಪ್ರದಾಯಿಕವಾಗಿ ಬೆಳೆಯುವ ಬ್ಯಾಡಗಿ ಕಡ್ಡಿ ಮತ್ತು ಡಬ್ಬಿ ತಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಸಿಂಜೆಂಟಾ ಕಂಪನಿಯವರು ಒಂದು ಹೊಸ ವೆರೈಟಿಯನ್ನು ಪರಿಚಯಿಸಿದ್ದಾರೆ. ಅದರ ಆವಕನೂ ಹೆಚ್ಚಾಗಿರುವ ಕಾರಣ ಬೆಲೆ ಕಡಿಮೆಯಾಗಿದೆ. ಕಡ್ಡಿ, ಡಬ್ಬಿ ತಳಿಯ ಬೆಲೆಗೆ ಇದನ್ನು ಹೋಲಿಸಿಕೊಂಡ ರೈತರೂ ಇದರಲ್ಲಿ ಇರಬಹುದು. ಆದರೆ, ಅದನ್ನು ಬೇರೆ ರೀತಿಯಲ್ಲಿ ಪ್ರದರ್ಶಿಸಬಹುದಿತ್ತು. ಇಲ್ಲಿನ ವರ್ತಕರಿಗೆ ಹಾಗೂ ಇಲಾಖೆಯವರಿಗೆ ವಿನಂತಿಸಿಕೊಂಡಿದ್ದರೆ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ದುರ್ದೈವ ಇಂತಹ ಘಟನೆ ನಡೆದುಹೋಗಿದೆ. ವಾರಕ್ಕೆ ಎರಡು ದಿನ ಹರಾಜು ಆಗಬೇಕಿರುವುದು ಒಂದು ದಿನ ಆಗಿದ್ದೂ ಇದಕ್ಕೆ ಕಾರಣ ಇರಬಹುದು ಎಂದರು.
ಬ್ಯಾಡಗಿಯಲ್ಲೇ ಮೆಣಸಿನಕಾಯಿ ಇನ್ನೂ ಪ್ರಚಲಿತವಾಗಿ ವ್ಯಾಪಾರವಾಗಬೇಕು. ರೈತರಿಗೆ ಹೆಚ್ಚಿನ ದರ ಸಿಗಬೇಕು ಎಂಬುದು ನಮ್ಮ ಆಶಯ. ಬ್ಯಾಡಗಿ ವರ್ತಕರು ಕೃತಜ್ಞತಾ ಭಾವದಿಂದ ಮಂಗಳವಾರ ಹರಾಜು ಮಾಡಿ ಮತ್ತೆ ಪುನರಾರಂಭ ಮಾಡುವ ಪ್ರಯತ್ನ ಮಾಡಿದ್ದಾರೆ. ಅವರ ಸಹಕಾರ ನಮ್ಮ ಜತೆಗೆ ಸದಾ ಹೀಗೆ ಇರಲಿ ಎಂದು ಮನವಿ ಮಾಡಿದರು.
ಕಿಡಿಗೇಡಿ ಕೃತ್ಯ ಶಂಕೆ
ಕರ್ನಾಟಕದವರೇ ಆಗಲಿ, ಆಂಧ್ರದವರೇ ಇರಲಿ ಬೇರೆ ರಾಜ್ಯದವರೇ ಇರಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವಂಥದ್ದು ನೋಡಿದರೆ ಇದು ಕೆಲ ಕಿಡಿಗೇಡಿಗಳ ಕೃತ್ಯ ಎನಿಸುತ್ತಿದೆ. ಅಂಥವರ ಬಗ್ಗೆ ಸ್ವಲ್ಪ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಒಬ್ಬ ಪ್ರತ್ಯಕ್ಷವಾಗಿ ಬೆಂಕಿ ತೆಗೆದುಕೊಂಡು ಹೋಗಿ ಕಾರಲ್ಲಿ ಹಾಕುವ ವಿಡಿಯೋ ನೋಡಿದೆ. ಯಾರೇ ಇದ್ದರೂ ಇಂತಹ ಕೆಲಸ ಸರಿಯಲ್ಲ. ಈಗಾಗಲೇ ಇಲಾಖೆಯವರು 81 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಯಾರಾದರೂ ನಿರಪರಾಧಿ ಇದ್ದರೆ ಅವರನ್ನು ಬಿಡುಗಡೆ ಮಾಡುತ್ತೇವೆ. ಯಾರು ನಿಜವಾಗಲೂ ಕಿಡಿಗೇಡಿತನ ಮಾಡಿದ್ದಾರೋ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು ಎಂದು ಶಿವಾನಂದ ಪಾಟೀಲ ಹೇಳಿದರು.
ವಿಲೇವಾರಿ ಪ್ರಯತ್ನ
ಈಗಾಗಲೇ ಹೆಚ್ಚು ಮೆಣಸಿನಕಾಯಿ ಶೇಖರಣೆ ಆಗಿದೆ. ಅದನ್ನು ಯಾವ ರೀತಿ ವಿಲೇವಾರಿ ಮಾಡಬೇಕು ಎಂದು ಇಲಾಖೆಯ ಡೆಪ್ಯುಟಿ ಕಮಿಷನರ್ ಜತೆ ಎರಡು ಬಾರಿ ಸಭೆ ಮಾಡಿದ್ದೇನೆ. ದೇಶದಲ್ಲಿ ಯಾರಿಗೆ ಮೆಣಸಿಕಾಯಿ ಅಗತ್ಯವಿದೆ. ಅವರಿಗೆ ಮಾರಾಟ ಮಾಡುವ ಪ್ರಯತ್ನ ಈಗಾಗಲೇ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net