ರೈತ ಕರಿಯಪ್ಪನ ಎರಡೂ ಕಾಲು ಕಟ್ !; * ಹಾವೇರಿ ಬಸ್ ನಿಲ್ದಾಣದಲ್ಲಿ ಅವಘಡ; ದಿಢೀರನೇ ಬಸ್ ಸಂಚಾರ ತಡೆದು ಪ್ರತಿಭಟಿಸಿದ ಪ್ರಯಾಣಿಕರು

19 HVR 5
Published on

ಹಾವೇರಿ: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ರೈತ ಕರಿಯಪ್ಪ ಮುಚ್ಚಿಕೊಪ್ಪನವರ ಎಂಬುವರ ಕಾಲಿನ ಮೇಲೆ ಸಾರಿಗೆ ಬಸ್ ಹರಿದ ಪರಿಣಾಮ ಅವರ ಎರಡೂ ಕಾಲುಗಳು ತುಂಡರಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ವಘಡದಿಂದ ಆಘಾತಕ್ಕೀಡಾದ ಪ್ರಯಾಣಿಕರು ದಿಢೀರ್ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿ ಕನಕಾಪುರದ ರೈತ ಕರಿಯಪ್ಪ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಕರಿಯಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಮುಂದಿನ ಗಾಲಿ ಕರಿಯಪ್ಪನ ಎರಡೂ ಕಾಲುಗಳ ಮೇಲೆ ಹರಿದಿದೆ. ಪರಿಣಾಮ ಅವರ ಎರಡೂ ಕಾಲುಗಳು ತುಂಡರಿಸಿ, ತೀವ್ರವಾಗಿ ರಕ್ತಸ್ರಾವ ಆಗುತ್ತಿತ್ತು. ಬಸ್ ಚಾಲಕನ ನಿರ್ಲಕ್ಷೃದಿಂದ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಚಾಲಕನ ನಿರ್ಲಕ್ಷೃದ ಚಾಲನೆಯಿಂದ ಬಸ್ ನಿಲ್ದಾಣ ಬಳಿ ಪದೇಪದೇ ಅಪಘಾತಗಳು ಉಂಟಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಹಾನಗಲ್ಲ ರಸ್ತೆಯಲ್ಲಿ ಸೇರಿದ್ದ ಪ್ರತಿಭಟನಕಾರರು, ಬಸ್ ನಿಲ್ದಾಣದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಕೆಲದಿನಗಳ ಹಿಂದೆಯಷ್ಟೇ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈಗ ರೈತ ಕರಿಯಪ್ಪ ತೀವ್ರ ಗಾಯಗೊಂಡಿದ್ದಾರೆ. ಅಪಘಾತಗಳು ಸಂಭವಿಸದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಯೊಬ್ಬ ಚಾಲಕರಿಗೆ, ಎಚ್ಚರಿಕೆಯಿಂದ ಬಸ್ ಚಲಾಯಿಸುವಂತೆ ಕಠಿಣ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಿಂದಾಗಿ ಹಾನಗಲ್ಲ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಭೇಟಿ ನೀಡಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ವಾಕರಸಾಸಂ) ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಅವರನ್ನು ಪ್ರತಿಭಟನಕಾರರ ತರಾಟೆಗೆ ತೆಗೆದುಕೊಂಡರು.

ಸ್ಥಳಕ್ಕೆ ಬಂದ ಪೊಲೀಸ್ ಹಿರಿಯ ಅಧಿಕಾರಿಗಳು, ಬಸ್ ಚಾಲಕನ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕವೇ ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net