

ಹಾವೇರಿ: ಹಾನಗಲ್ಲ ತಾಲೂಕು ಅಕ್ಕಿಆಲೂರ ಬಳಿ ಚಲಿಸುತ್ತಿದ್ದ ಸಾರಿಗೆ ಬಸ್‌ನಿಂದ ಜಾರಿಬಿದ್ದು ಮೃತಪಟ್ಟಿದ್ದ ಶಾಲಾ ಬಾಲಕಿ, ವಾಸನ ಗ್ರಾಮದ ಮಧು ಕೆ. ಚಕ್ರಸಾಲಿ ಕುಟುಂಬದವರಿಗೆ ಹಾವೇರಿ ವಿಭಾಗೀಯ ಕಚೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ವಿ.ಎಂ. ಶುಕ್ರವಾರ 2.85 ಲಕ್ಷ ರೂ. ಮೌಲ್ಯದ ಚೆಕ್ ಹಸ್ತಾಂತರಿಸಿದರು.
ನಿಯಮಾನುಸಾರ ಸಂಸ್ಥೆಯ ವಾಹನದಿಂದ ಅಪಘಾತವಾಗಿ ಪ್ರಯಾಣಿಕರು ಮೃತಪಟ್ಟರೆ ಮೂರು ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ. ಜು 12ರಂದು ಘಟನೆ ನಡೆದಿದ್ದು, ಮರು ದಿನವೇ 15,000 ರೂ. ಮಧ್ಯಂತರ ಪರಿಹಾರವನ್ನು ವಾರಸುದಾರರಿಗೆ ನೀಡಲಾತ್ತು. ಬಾಕಿ 2.85 ಲಕ್ಷ ರೂ. ಮೊತ್ತದ ಚೆಕ್ ಇಂದು ವಿತರಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ವಿ.ಎಂ. ತಿಳಿಸಿದರು.
ಹಾವೇರಿ ವಿಭಾಗಿಯ ಸಾರಿಗೆ ಅಧಿಕಾರಿ ಅಶೋಕ್ ಪಾಟೀಲ, ಸಹಾಯಕ ಅಂಕಿ ಅಂಶ ಅಧಿಕಾರಿ ಸತೀಶ ಕಾಡನವರ, ವಿಭಾಗೀಯ ಭದ್ರತಾ ಅಧೀಕ್ಷಕರು ಎಚ್.ಡಿ.ತೊಗುಣಸಿ, ಇತರರು ಇದ್ದರು.