

ಹಾವೇರಿ: ನಮ್ಮಲ್ಲಿ ಕೆಲವು ನೈಸರ್ಗಿಕ ಬದಲಾವಣೆಗಳಾದರೆ ಮಾತ್ರ ಜೀವನದಲ್ಲಿ ಸಂತೋಷವನ್ನು ತಂದುಕೊಳ್ಳಬಹುದು. ಜತೆಗೆ ಭಗವಂತನನ್ನು ನಂಬಿದರೆ ಭಗವಂತ ನಮಗೆ ಶ್ರೇಷ್ಠವಾದ ಸ್ಥಾನವನ್ನೇ ಕೊಡುತ್ತಾನೆ ಎಂದು ಅಂತಾರಾಷ್ಟ್ರೀಯ ಪ್ರೇರಕ ಪ್ರವಚನಕಾರ್ತಿ ಬ್ರಹ್ಮಾಕುಮಾರಿ ಶಿವಾನಿ ಹೇಳಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ‘ಜೀವನದಲ್ಲಿ ಸಂತೋಷ’ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಹಿಂದಿನ ಪೀಳಿಗೆಯವರು ಸಂತೋಷದಿಂದ ಇರುತ್ತಿದ್ದರು. ನೆಮ್ಮದಿಯ ಜೀವನ ಅವರದಾಗಿರುತ್ತಿತ್ತು. ಇದೀಗ ಕೆಲ ಮಾಧ್ಯಮಗಳಿಂದಾಗಿ ಜೀವನದಲ್ಲಿ ಒತ್ತಡಗಳು ಹೆಚ್ಚಾಗಿವೆ. ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಮನೆ ಮುರಿಯುವ ಧಾರಾವಾಹಿಗಳು ವಿಜೃಂಭಿಸುತ್ತಿವೆ. ಇದೆಲ್ಲವನ್ನೂ ಬದಿಗಿಟ್ಟು, ಸಾತ್ವಿಕ ಆಹಾರ ಸೇವಿಸಿ, ರಾತ್ರಿ ಬೇಗ ಮಲಗಿ ಬೇಗ ಎದ್ದರೆ ಸಂತೋಷಕರ ಜೀವನ ನಿಮ್ಮದಾಗಿಸಿಕೊಳ್ಳಬಹುದು ಎಂದರು.
ಕೇವಲ ತೆಗೆದುಕೊಳ್ಳುವವರಾಗದೇ, ಸಾಧ್ಯವಾದಷ್ಟು ಜನರಿಗೆ ಕೊಡುವ ಕೆಲಸ ಮಾಡೋಣ. ನಿತ್ಯವೂ ಕನಿಷ್ಠ 15 ನಿಮಿಷ ಇತರರಿಗಾಗಿ ಕೆಲಸ ಮಾಡೋಣ. ರಾಜಯೋಗ ಮೆಡಿಟೇಶನ್ ಮೂಲಕ ಮರಳಿ ನಮ್ಮ ಜೀವನದಲ್ಲಿ ಸಂತೋಷವಾಗಿರಲು ಪ್ರಯತ್ನಿಸಿ. ಫೆ.2ರಿಂದ ಹಾವೇರಿಯ ಈಶ್ವರೀಯ ವಿಶ್ವವಿದ್ಯಾಲಯದ ಶಿವಾಲಯದಲ್ಲಿ ಪ್ರತಿದಿನ ಸಂಜೆ 6.30ರಿಂದ 7.30ರವರೆಗೆ ರಾಜಯೋಗ ಮೆಡಿಟೇಶನ್ ತರಗತಿ ಆರಂಭವಾಗಲಿವೆ ಎಂದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬ್ರಹ್ಮಾಕುಮಾರ ಬಸವರಾಜ ರಾಜಋಷಿ, ಶಿವರಾಜ ಸಜ್ಜನರ, ಪ್ರೊ.ಸುರೇಶ ಜಂಗಮಶೆಟ್ಟಿ, ವೀರಮಲ್ಲಪ್ಪ ಪೂಜಾರ, ವಾಸಿಮಬಾಬಾ ಮುದ್ದೇಬಿಹಾಳ, ಬ್ರಹ್ಮಾಕುಮಾರಿ ನಿರ್ಮಲಾ, ಬ್ರಹ್ಮಾಕುಮಾರಿ ಲೀಲಾಜಿ, ಇತರರಿದ್ದರು.
ಕೋಟ್
ಪ್ರತಿಯೊಬ್ಬ ಭಾರತೀಯರು ತಮ್ಮಲ್ಲಿ ಉತ್ತಮ ಸಂಸ್ಕಾರ ಬೆಳೆಸಿಕೊಂಡರೆ ಭಾರತ ವಿಶ್ವಗುರು ಆಗಲಿದೆ. ಸುವರ್ಣ ಭಾರತವಾಗಲಿದೆ. ಪೋನು, ಟಿವಿ ಬಿಡಿ, ಧ್ಯಾನದಲ್ಲಿ ಪರಮಾತ್ಮನನ್ನು ಕಾಣಿ. ಸಂಸಾರ ಒಡೆಯುವ ಧಾರವಾಹಿ ನೋಡಬೇಡಿ, ಸಂಸಾರ ಕೂಡಿಸುವ, ಮನಸ್ಸಿಗೆ ಶಾಂತಿ ನೀಡುವ ರಾಮಾಯಣ, ಮಹಾಭಾರತದಂತಹ ಧಾರವಾಹಿ ವೀಕ್ಷಿಸಿ.
- ಶಿವಾನಿ, ಅಂತಾರಾಷ್ಟ್ರೀಯ ಪ್ರೇರಕ ಪ್ರವಚನಕಾರ್ತಿ