ಬೆಂಗಳೂರಿನಲ್ಲಿ ಬ್ರಾಹ್ಮಣ ಸಮ್ಮೇಳನ ಜ.18, 19ರಂದು; ಹಾವೇರಿ ಜಿಲ್ಲೆಯಿಂದ 4 ಸಾವಿರಕ್ಕೂ ಹೆಚ್ಚು ಜನ ಭಾಗಿ; ಅಗಡಿ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಹೇಳಿಕೆ

16 Gurudattamurthy Chakravarthi Swamiji 2
Published on

ಹಾವೇರಿ: ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ಜ.18, 19ರಂದು ನಡೆಯಲಿರುವ 50ನೇ ವರ್ಷದ ಸುವರ್ಣ ಬ್ರಾಹ್ಮಣ ಮಹಾಸಮ್ಮೇಳನಕ್ಕೆ ಜಿಲ್ಲೆಯಿಂದ ಅಂದಾಜು 4 ಸಾವಿರಕ್ಕೂ ಅಧಿಕ ಸಮಾಜದ ಜನ ಭಾಗವಹಿಸಲಿದ್ದಾರೆ ಎಂದು ತಾಲೂಕಿನ ಅಗಡಿಯ ಆನಂದವನದ ಶ್ರೀ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.17ರಂದು ಪೂಜೆ, ಯಾಗ, ಕಳಸ ಸ್ಥಾಪನೆ ಜರುಗಲಿದೆ. 18ರಂದು ಶೃಂಗೇರಿ ಶಾರದಾಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ವಿವಿಧ ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು. ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಪ್ರಲ್ಹಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ರಾಜ್ಯ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಮತ್ತಿತರ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪಾಣಿಗ್ರಹಣ ವೇದಿಕೆ ಉದ್ಘಾಟನೆ, ಸ್ಮರಣ ಸಂಚಿಕೆ ಹಾಗೂ ಹಲವು ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಬ್ರಹ್ಮತೇಜ ಪ್ರಶಸ್ತಿ ಪ್ರದಾನ, ಉತ್ತರಾದಿಮಠದ 1008 ಸತ್ಯಾತ್ಮತೀರ್ಥ ಸ್ವಾಮೀಜಿ ಆಶೀರ್ವಚನ, ಸಾಂಸ್ಕತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

19ರಂದು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಇತರರು ಭಾಗವಹಿಸುವರು. ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸುವರು. ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮ, ವಾಣಿಜ್ಯ ಸಮಾವೇಶ ಜರುಗಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾವೇಶ ಸಮಿತಿಯ ರಾಜ್ಯ ಉಪಾಧ್ಯಕ್ಷ ಪವನ ಬಹದ್ದೂರ ದೇಸಾಯಿ, ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವಸಂತ ಮೊಕ್ತಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತನಾಯಕ ಬಾದಾಮಿ, ಜಿಲ್ಲಾ ಮಹಿಳಾ ಸಂಚಾಲಕಿ ದೀಪಾ ಪಾಟೀಲ, ಸಮ್ಮೇಳನ ಸಮಿತಿ ಜಿಲ್ಲಾ ಸಂಘಟಕ ಸುಬ್ರಹ್ಮಣ್ಯ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ, ತಾಲೂಕು ಕಾರ್ಯದರ್ಶಿ ದತ್ತಾತ್ರೇಯ ಕಳ್ಳಿಹಾಳ, ರಮೇಶ ಕುಲಕರ್ಣಿ, ಪ್ರಕಾಶ ಪೂಜಾರ, ಇತರರಿದ್ದರು.

ಜಿಲ್ಲೆಯ ಇಬ್ಬರಿಗೆ ಪ್ರಶಸ್ತಿ :

ಸಮಾವೇಶದಲ್ಲಿ ಜಿಲ್ಲೆಯ ಉದ್ಯಮಿ ಹಾಗೂ ಸಮಾವೇಶ ಸಮಿತಿ ಉಪಾಧ್ಯಕ್ಷ ಪವನ ಬಹದ್ದೂರ ದೇಸಾಯಿ ಅವರಿಗೆ ನಮ್ಮವರು ನಮ್ಮ ಹೆಮ್ಮೆ ಎಂಬ ಪುರಸ್ಕಾರ ಪ್ರದಾನ ಮಾಡಲಾಗುವುದು. ಪಂ.ಶಂಕರ ಭಟ್ ಜೋಶಿ ಅವರಿಗೆ ಬ್ರಹ್ಮ ತೇಜ ಎಂಬ ಬಿರುದು ನೀಡಲಾಗುವುದು ಎಂದು ಸಮ್ಮೇಳನದ ಪ್ರಧಾನ ಸಂಚಾಲಕ ವಿಜಯ ನಾಡಜೋಶಿ ತಿಳಿಸಿದರು.

11.5 ಗುಂಟೆ ನಿವೇಶನ ಮಂಜೂರು

ಹಾವೇರಿ ನಗರದ ಅಜ್ಜಯ್ಯನ ದೇವಸ್ಥಾನ ಬಳಿ ಬ್ರಾಹ್ಮಣ ಸಮಾಜಕ್ಕೆ 11.5 ಗುಂಟೆ ನಿವೇಶನ ಮಂಜೂರು ಮಾಡಲಾಗಿದೆ. ಈ ಜಾಗದಲ್ಲಿ ಸಮಾಜದ ಮಕ್ಕಳಿಗಾಗಿ ವಸತಿ ನಿಲಯ ಸೌಲಭ್ಯ, ಸಮುದಾಯ ಭವನ ಹಾಗೂ ಶಿವ ಚಿದಂಬರೇಶ್ವರ ದೇವಸ್ಥಾನ ನಿರ್ಮಿಸಲಾಗುವುದು ಎಂದು ವಿಜಯ ನಾಡಜೋಶಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net