

ಹಾವೇರಿ: ಜಿಲ್ಲೆಯಲ್ಲಿ ಬ್ರಾಹ್ಮಣ ಸಮುದಾಯದ ಸಂಘಟನೆಗಾಗಿ ಮೇ 7ರಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗುತ್ತಿದ್ದು, ಸಮುದಾಯದವರು ಅಗತ್ಯ ಸಹಕಾರ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಸಂಜಯ ನಾಯಕ ಮನವಿ ಮಾಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಮಹಾಸಭಾದ ಚುನಾವಣೆಯಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಸ್ಪರ್ಧಿಸಿ, ಕೇವಲ 118 ಮತಗಳಿಂದ ಸೋತಿರುವುದು ಬೇಸರವಿಲ್ಲ. ಚುನಾವಣೆ ನೆಪದಲ್ಲಿ ಜಿಲ್ಲೆಯ ಸಮಾಜದ ಸ್ಥಿತಿಗತಿ ಅರ್ಥವಾಯಿತು. ಸಮಾಜದ ಏಳ್ಗೆಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ. ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ದೇವರಗುಡ್ಡ ಮಾಲತೇಶ ದೇವಸ್ಥಾನದ ಅರ್ಚಕ ಸಂತೋಷ ಭಟ್ ಗುರೂಜಿ ಮಾತನಾಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿ ಸಂಜಯ ನಾಯಕ ಅವರು ಆಯ್ಕೆಯಾಗಿರುವುದು ಜಿಲ್ಲೆಯ ಸಮುದಾಯದ ಸಂಘಟನೆಗೆ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಸುಮಾರು 35 ಸಾವಿರ ಸದಸ್ಯರು ಇದ್ದಾರೆ. ಆದರೆ, ಸದ್ಯ 1,700 ಸದಸ್ಯರು ಮಾತ್ರ ನೋಂದಣಿಯಾಗಿದೆ. ಹಾಗಾಗಿ, ಸದಸ್ಯತ್ವ ಅಭಿಯಾನ ಮಾಡುವುದು ಮುಖ್ಯ ಕೆಲಸವಾಗಿದೆ ಎಂದರು.
ಜಾತಿ ಗಣತಿಯಲ್ಲಿ ಹಿಂದು ಬ್ರಾಹ್ಮಣ ಎಂದು ಮಾತ್ರ ಸೇರಿಸಿದರೆ ಸಮಾಜದ ಜನಸಂಖ್ಯೆ ಸ್ಪಷ್ಟವಾಗಿ ತಿಳಿಯುತ್ತದೆ. ಹಾವೇರಿ ನಗರದಲ್ಲಿ ಮಹಾಸಭಾಕ್ಕೆ 11 ಗುಂಟೆ ಜಾಗ ಮಂಜೂರಾಗಿದೆ. ಗಾಯತ್ರಿ ಭವನ, ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಗೋಶಾಲೆ ಆರಂಭಿಸುವ ಉದ್ದೇಶವಿದೆ. ಸಮಾಜದವರು ಈಗಲಾದರೂ ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಜೀವ ಶಿರಹಟ್ಟಿ, ಗುರುರಾಜ ಶಿರಹಟ್ಟಿ, ಧೀರೇಂದ್ರ ಪಂಚಬಾವಿ, ಇತರರು ಇದ್ದರು.
ಜನಿವಾರದ ತಂಟೆಗೆ ಬಂದರೆ ಹೋರಾಟ
ದೇಶದಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡುವುದು ನಡೆದಿದೆ. ಮೊನ್ನೆ ಸಿಇಟಿ ಕೇಂದ್ರಗಳಲ್ಲಿ ಜನಿವಾರ ತೆಗೆಸುವ ಕೆಲಸ ಆಯಿತು. ಸಮುದಾಯದಿಂದ ಪ್ರತಿಭಟನೆ ಎದುರಿಸಿದ ನಂತರ ಒಬ್ಬರನ್ನು ಅಮಾನತು ಮಾಡಿದರು. ಕಲಬುರಗಿಯಲ್ಲಿ ನೀಟ್ ಪರೀಕ್ಷೆಯಲ್ಲಿ ಮತ್ತೆ ಅಂತಹದ್ದೇ ಪ್ರಕರಣ ನಡೆಯಿತು. ಈ ಬಗ್ಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಮಾಜ ಬೀದಿಗೆ ಇಳಿದು ಹೋರಾಟ ಮಾಡುತ್ತದೆ ಎಂದು ಮಹಾಸಭಾದ ಪ್ರಮುಖ ಸಂಜೀವ ಶಿರಹಟ್ಟಿ ಎಚ್ಚರಿಕೆ ನೀಡಿದರು.