

ಹಾವೇರಿ: ಭಾರೀ ಮಳೆ ಸುರಿಯುತ್ತಿದ್ದು, 12 ವರ್ಷದ ಬಾಲಕನೋರ್ವ ಮಳೆ ನೀರಿಗೆ ಚರಂಡಿಯಲ್ಲಿ ಕೊಚ್ಚಿ ಹೋದ ಘಟನೆ ಹಾವೇರಿ ನಗರದ ಎಸ್ಪಿ ಕಚೇರಿ ಮುಂಭಾಗ ನಡೆದಿತ್ತು. ಜಾರಿ ಕಾಲಿವೆಯಲ್ಲಿ ಬಿದ್ದಿದ್ದ ಬಾಲಕ ನಿವೇದನ ಗುಡಗೇರಿ ಮೃತದೇಹ ಪತ್ತೆಯಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಕಾಲುವೆಯಿಂದ ಬಾಲಕನನ್ನು ಪತ್ತೆ ಹಚ್ಚಿದ್ದು, ಬಾಲಕನ ಶವವನ್ನು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಲಾಗಿದೆ. ಮೃತ ಬಾಲಕನ ಪಾಲಕರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವೇದು ಗುಡಗೇರಿ ಮೃತ ಬಾಲಕ. ಶಿವಾಜಿನಗರದ ನಿವಾಸಿ ಎಂದು ತಿಳಿದುಬಂದಿದೆ. ರಭಸವಾಗಿ ಹರಿಯುತ್ತಿದ್ದ ರಾಜಕಾಲುವೆಯ ನೀರಿನಲ್ಲಿ ಈತ ಕೊಚ್ಚಿ ಹೋಗಿದ್ದಾನೆ. ಸದ್ಯ ಕಣ್ಮರೆಯಾದ ಬಾಲಕನ ಮೃತದೇಹ ಪತ್ತೆಯಾಗಿದೆ.
ನಸುಕಿನ ಜಾವದಿಂದ ಸುರಿದ ಭಾರಿ ಮಳೆಗೆ ಕಾಲುವೆ, ರಾಜಕಾಲುವೆ ಭರ್ತಿಯಾಗಿ ರಭಸವಾಗಿ ಹರಿಯುತ್ತಿತ್ತು. ಮೂರ್ನಾಲ್ಕು ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ತೆರೆದ ಕಾಲುವೆ ದಾಟಲು ಮುಂದಾದಾಗ ಬಾಲಕ ಕಾಲುಜಾರಿ ಕಾಲುವೆಗೆ ಬಿದ್ದಿದ್ದಾನೆ. ಪೊಲೀಸ್, ನಗರಸಭೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಲಕನ ಪತ್ತೆ ಕಾರ್ಯಾಚರಣೆ ಆರಂಭಿಸಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಈ ಕಾಲುವೆ ಕಾಮಗಾರಿ ಸರಿಯಾಗಿ ಮಾಡಿಲ್ಲ. ಅಲ್ಲಲ್ಲಿ ಕಾಲುವೆಯನ್ನು ತೆರೆದು ಕೈಬಿಡಲಾಗಿದೆ. ಇದೇ ಕಾರಣಕ್ಕೆ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.