ಹಾವೇರಿ: ರಾಜ್ಯದಲ್ಲಿ 2024ರಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳನ್ನು ಹಾಗೂ ಹೊರ ರಾಜ್ಯಗಳಲ್ಲಿ ಮುದ್ರಣಗೊಂಡು ಪ್ರಕಟವಾಗುವ ಆಂಗ್ಲ, ಹಿಂದಿ ಅಥವಾ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆಗೆ ಆಹ್ವಾನಿಸಲಾಗಿದೆ.
ಕರ್ನಾಟಕದಲ್ಲಿ 2024ರಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಜನವರಿ 1, 2025ರೊಳಗಾಗಿ ನೋಂದಣಿ ಮಾಡಿಸಬೇಕು. ಹೊರ ರಾಜ್ಯಗಳಲ್ಲಿ ಮುದ್ರಣಗೊಂಡು ಪ್ರಕಟವಾಗುವ ಆಂಗ್ಲ, ಹಿಂದಿ ಅಥವಾ ಯಾವುದೇ ಭಾಷೆಯ ಪುಸ್ತಕಗಳನ್ನು ಆಯಾ ರಾಜ್ಯದ ಕೇಂದ್ರ ಗ್ರಂಥಾಲಯಗಳಲ್ಲಿ ಅಥವಾ ಕೇಂದ್ರ/ಆಯಾ ರಾಜ್ಯ ಸರ್ಕಾರದಿಂದ ಅಧಿಸೂಚಿಸಲ್ಪಟ್ಟ ಅಧಿಕೃತ ಪುಸ್ತಕ ನೋಂದಣಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ, ನೋಂದಣಿ ಪ್ರಮಾಣಪತ್ರದ ನಕಲು ಪತ್ರದ ಪ್ರತಿಯೊಂದಿಗೆ ಮತ್ತು ಈ ಪುಸ್ತಕದ ಒಂದು ಪ್ರತಿಯನ್ನು ಜನವರಿ 2, 2025ರೊಳಗಾಗಿ ಆಯ್ಕೆಗಾಗಿ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಸಲ್ಲಿಸಬೇಕು.
2024ನೇ ವರ್ಷದಲ್ಲಿ ಪ್ರಕಟಗೊಂಡ ಪುಸ್ತಕಗಳ ಆಯ್ಕೆಗೆ ಪ್ರತ್ಯೇಕವಾಗಿ ಆಯುಕ್ತರ ಕಚೇರಿಯಲ್ಲಿಯಾವುದೇ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಪುಸ್ತಕಗಳನ್ನು ಸಲ್ಲಿಸಲು ಇಚ್ಚಿಸುವ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಾಶಕರು ನಿಗದಿತ ಅವಧಿಯೊಳಗೆ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳ ನೋಂದಣಿ ಅಧಿನಿಯಮದಡಿ ನಿಯಮಾನುಸಾರ ಪುಸ್ತಕಗಳನ್ನು ಸಲ್ಲಿಸಬೇಕು.
ನೋಂದಣಿಗಾಗಿ ನಿಗದಿತ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಇಲಾಖಾ ಅಂತರ್ಜಾಲ www.dpl.karnataka.gov.in ಮತ್ತು ರಾಜ್ಯದ ಎಲ್ಲ ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯಗಳ ಉಪನಿರ್ದೇಶಕರು, ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿಗಳಲ್ಲಿ ಪಡೆಯಬಹುದು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.