

ಹಾವೇರಿ: ಬೆಂಗಳೂರು- ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆ ಮಾಡುವಂತೆ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಸಚಿವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ದೇಶದಲ್ಲಿ ಕಳೆದ ಹತ್ತು ವರ್ಷ ಎಲ್ಲ ರಂಗದಲ್ಲಿ ಬಹಳ ದೊಡ್ಡ ಕ್ರಾಂತಿಯಾಗಿದೆ. ವಿಶೇಷವಾಗಿ ರೈಲ್ವೆ ಸಂಪರ್ಕ, ಡಿಜಿಟಲ್, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಬೆಂಗಳೂರ- ಧಾರವಾಡ ಮಧ್ಯ ಸಂಚರಿಸುವ ವಂದೇ ಭಾರತ ರೈಲು ಕೇವಲ ಐದು ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಧಾರವಾಡಕ್ಕೆ ಬರುತ್ತದೆ. ಇದು ಕೇವಲ ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಈ ರೈಲು ಹಾವೇರಿಯಲ್ಲಿಯೂ ನಿಲುಗಡೆಯಾಗಬೇಕೆಂದು ಹಾವೇರಿ ಜಿಲ್ಲೆಯ ಜನರ ಒತ್ತಾಸೆಯಾಗಿತ್ತು. ಹಾವೇರಿಯು ಶಿರಸಿ, ಕಾರವಾರ ಕಡಲು ಕರ್ನಾಟಕ ಹಾಗೂ ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ನಡುವೆ ಸಂಪರ್ಕ ಕೇಂದ್ರವಾಗಿದೆ. ಹೀಗಾಗಿ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆ ಆಗಬೇಕೆಂದು ಹಾವೇರಿ ಜನತೆ, ಚೇಂಬರ್ ಆಫ್ ಕಾಮರ್ಸ್ ಬೇಡಿಕೆ ಇತ್ತು.
ಜಿಲ್ಲೆಯ ಜನರ ಬೇಡಿಕೆ ಕುರಿತು ಅಶ್ವಿನಿ ವೈಷ್ಣವ್ ಅವರ ಮೇಲೆ ಒತ್ತಡ ಹೇರಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೊಮಣ್ಣ ಅವರಿಗೆ ಮನವಿ ಮಾಡಿದ್ದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಆದೇಶ ನೀಡಿದ್ದಾರೆ. ಸದ್ಯ ಇದು ಟ್ರಯಲ್ ಬೇಸಿಸ್ ಆಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದರೆ ಕಾಯಂ ಮಾಡುತ್ತಾರೆ. ಈ ರೈಲು ನಿಲುಗಡೆಯ ಉದ್ಘಾಟನೆ ದಿನಾಂಕವನ್ನು ಶೀಘ್ರವೇ ನಿಗದಿ ಮಾಡುತ್ತಾರೆ. ಹಾವೇರಿಯ ಜನತೆ ವಂದೇ ಭಾರತ ರೈಲನ್ನು ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳಬೇಕು ಎಂದು ಬೊಮ್ಮಾಯಿ ಮನವಿ ಮಾಡಿದ್ದಾರೆ.