ನಾನು ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಿರಲಿಲ್ಲ; ಕಾರ್ಯಕರ್ತರಿಗೆ ಎಂದಿಗೂ ಅನ್ಯಾಯ ಮಾಡಿಲ್ಲ; ಸಂಸದ ಬಸವರಾಜ ಬೊಮ್ಮಾಯಿ

Bommai
Published on

ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಿರಲಿಲ್ಲ. ನಾನು ಕಾರ್ಯಕರ್ತರಿಗೆ ಅನ್ಯಾಯ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತುಕೊಟ್ಟು ತಪ್ಪಿದ್ದಾರೆ’ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಾನು ಯಾರಿಗೂ ಟಿಕೆಟ್ ಕೊಡಿಸುತ್ತೇನೆ ಎಂದು ಮಾತು ಕೊಟ್ಟಿಲ್ಲ. ಸುಮಾರು 50 ಜನ ಆಕಾಂಕ್ಷಿಗಳು ಇದ್ದರು, ಎಲ್ಲರಿಗೂ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರಬೇಕು ಎಂದು ಮಾತ್ರ ಹೇಳಿದ್ದೆ. ಇದು ನನ್ನ ನಿರ್ಣಯ ಅಲ್ಲ. ಪಕ್ಷದ ನಿರ್ಣಯ. ನಾನು ಯಾರಿಗೂ ಮಾತುಕೊಟ್ಟಿಲ್ಲ. ಮಾತು ತಪ್ಪಿಲ್ಲ ಎಂದು ಹೇಳಿದರು.
ನನ್ನ ಮಗನನ್ನು ನಿಲ್ಲಿಸಲು ಆಸಕ್ತಿ ಇರಲಿಲ್ಲ. ಕೊನೆಯ ಘಳಿಗೆವರೆಗೂ ಬೇಡ ಎಂದೇ ಹೇಳಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಟಿಕೆಟ್ ನೀಡಿದೆ. ಗೆಲ್ಲುವ ದೃಷ್ಟಿಯಿಂದ ಟಿಕೆಟ್ ನೀಡಿದೆ. ಪಕ್ಷದ ಆದೇಶವನ್ನು ಪರಿಪಾಲನೆ ಮಾಡುವುದು ನನ್ನ ಕಾರ್ಯ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿ ಟಿಕೆಟ್ ಫೈನಲ್ ಮಾಡಿದ್ದಾರೆ ಎಂದು ಹೇಳಿದರು.
ನನ್ನ ಕಾರ್ಯಕರ್ತರಿಗೆ ಎಂದೂ ಅನ್ಯಾಯ ಮಾಡಿಲ್ಲ. ಅವರಿಗೆ ಕ್ಯಾಬಿನೆಟ್ ಸ್ಥಾನ ನೀಡಿದ್ದೇನೆ. ಹಲವಾರು ಸ್ಥಾನಮಾನ ಮಾಡಿದ್ದೇನೆ. ಶ್ರೀಕಾಂತ ದುಂಡಿಗೌಡ್ರ ಜತೆ ಮಾತನಾಡುತ್ತೇನೆ. ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಚನ್ನಪಟ್ಟಣ ಸಮಸ್ಯೆ, ಹೈಕಮಾಂಡ್ ಮಧ್ಯಸ್ಥಿಕೆ
ಚನ್ನಪಟ್ಟಣ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕ್ಷೇತ್ರ. ಸಿ.ಪಿ.ಯೋಗಿಶ್ವರ್ ರಾಜೀನಾಮೆ ವಿಚಾರ ಗೊತ್ತಿಲ್ಲ. ಅವರಿಬ್ಬರೂ ಮಾತುಕತೆ ಮಾಡಿಕೊಂಡು ಹೊಂದಾಣಿಕೆ ಆಗಬೇಕಿತ್ತು. ತಡವಾಗಿದ್ದಕ್ಕೆ ಈ ನಿರ್ಧಾರಕ್ಕೆ ಬಂದಿರಬಹುದು. ನಮ್ಮ ಪಕ್ಷದ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಸರಿಪಡಿಸುವ ಕಾರ್ಯ ಮಾಡುತ್ತದೆ. ಯೋಗಿಶ್ವರ ಕಾಂಗ್ರೆಸ್ ಸಂಪರ್ಕದಲ್ಲಿರುವ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net