ಬೇಡ್ತಿ- ವರದಾ ನದಿ ಜೋಡಣೆ ಶತಸಿದ್ಧ; ಕೇಂದ್ರ, ರಾಜ್ಯ ಸರ್ಕಾರಗಳು ಒಟ್ಟಾದರೆ ಫಲಪ್ರದ; ಆ.10ರಿಂದ ಜನಜಾಗೃತಿ ಸಭೆ, ಬೊಮ್ಮಾಯಿ ಹೇಳಿಕೆ

Bommai pressmeet
Published on

ಹಾವೇರಿ: ಹಾವೇರಿ, ಗದಗ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆ ಸೇರಿದಂತೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ಆಗಸ್ಟ್ 10ರಿಂದ ಹಾವೇರಿಯಿಂದ ಈ ಕುರಿತು ಪಕ್ಷಾತೀತವಾಗಿ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗುವುದು. ಯೋಜನೆ ಜಾರಿಗೊಳಿಸುವುದು ಶತಸಿದ್ಧ ಎಂದು ಸಂಸದ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ, ಕೇಂದ್ರ ಎರಡೂ ಸರ್ಕಾರಗಳು ಒಂದಾದರೆ ಈ ಯೋಜನೆ ಫಲಪ್ರದವಾಗಲಿದೆ. ಈ ಕುರಿತು ಜನಾಭಿಪ್ರಾಯ ಸಂಗ್ರಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಾವೇರಿಯಲ್ಲಿ ಆ.10ರಂದು ನಡೆಯುವ ಸಭೆಗೆ ಪಕ್ಷಾತೀತ ಸಭೆಗೆ ಎಲ್ಲರನ್ನೂ ಆಹ್ವಾನಿಸಲಾಗುವುದು. ಇದರಿಂದ ಈ ಭಾಗದ ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿದು, ನೀರಾವರಿಗೂ ಅನುಕೂಲವಾಗಲಿದೆ ಎಂದರು.

ನದಿ ಜೋಡಣೆಯ ಬಗ್ಗೆ ಮೊದಲು ದಿಟ್ಟ ಕ್ರಮ ಕೈಗೊಂಡವರು ಮಾಜಿ ಪಧಾನಿ ಅಟಲ್ ಬಿಹಾರಿ ವಾಜಪೇಯಿ. ಬೇಡ್ತಿ- ವರದಾ ನದಿ ಜೋಡಣೆಗೆ ಎನ್‌ಡಬ್ಲೂೃಡಿಎನಿಂದ ಈಗಾಲೇ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಹಲವು ಸವಾಲುಗಳಿದ್ದವು. ನಾವು ಮೊದಲನೇ ಪ್ರಸ್ತಾವನೆಯನ್ನು ಜಾರಿಗೆ ತರಲು ಹೋದಾಗ ಪರಿಸರದ ಮೇಲೆ ಪರಿಣಾಮ ಆಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯಿಂದ ವಿರೋಧ ಕೇಳಿಬಂತು. ಹಾಗಾಗಿ, ಅದನ್ನು ಮಾರ್ಪಾಡು ಮಾಡಿ ನಾನು ಸಿಎಂ ಆಗಿದ್ದಾಗ ಎನ್‌ಡಬ್ಲೂೃಡಿಎಗೆ ಕಳುಹಿಸಿದ್ದೆ. ಅದರಲ್ಲಿ ಕೆಲವು ಮಾರ್ಪಾಡಲು ಮಾಡಲು ಅವರು ಕಳುಹಿಸಿದ್ದಾರೆ. ಯಾವುದೇ ಪರಿಸರ ಮತ್ತು ಜೈವಿಕ ಹಾನಿಯಾಗದಂತೆ ಲಿಂಕ್ ಮುಖಾಂತರ ಮಾಡುವಂತಹ ಯೋಜನೆ ಇದಾಗಿದೆ. ಬೇಡ್ತಿ-ವರದಾ ನ್ಯಾಷನಲ್ ಪ್ರಾಸ್ಪೆಕ್ಟಿವ್ ಪ್ಲಾನ್ ಮತ್ತು ಇನ್ನೊಂದು ಬೇಡ್ತಿ- ಧರ್ಮಾ- ವರದಾ ಲಿಂಕ್ ಮೂಲಕ ಜೋಡಣೆ ಮಾಡಲು ಇಂಜಿನಿಯರ್‌ಗಳು ಯೋಜನೆ ರೂಪಿಸಿದ್ದಾರೆ. ಎರಡು ಲಿಂಕ್‌ನಲ್ಲಿ ಒಟ್ಟು 18.43 ಟಿಎಂಸಿ ನೀರು ಹರಿಸುವ ಯೋಜನೆ ಆಗುತ್ತದೆ. ಶಿರಹಟ್ಟಿಯ ಹಿರೇವಡ್ಡಟ್ಟಿಯ ಜಲಾಶಯದಲ್ಲಿ 10 ಟಿಂಎಸಿ ನೀರು ಶೇಖರಿಸಲು ಚಿಂತಿಸಲಾಗಿದೆ ಎಂದರು.

ಪರಿಸರ ಹಾನಿ ಆಗಲ್ಲ

ಬೇಡ್ತಿ- ವರದಾ ನದಿ ಜೋಡಣೆಗೆ 1995ರಲ್ಲಿ ಮೊದಲ ರೂಪರೇಷೆ ಆಗಿತ್ತು. ನಂತರ 2008-09ರಲ್ಲಿ ಜಾರಿ ಮಾಡಲು ಹೋದಾಗ ವಿರೋಧ ವ್ಯಕ್ತವಾಯಿತು. ಅದನ್ನು ಮಾರ್ಪಾಡು ಮಾಡಿ 2017ರಲ್ಲಿ ಯೋಜನೆ ತಯಾರಿಸಲಾಯಿತು. ನಾನು ಸಿಎಂ ಆಗಿದ್ದಾಗ 2022ರಲ್ಲಿ ಡಿಪಿಆರ್ ಕಳುಹಿಸಲಾಗಿತ್ತು. ಈಗ ಎನ್‌ಡಬ್ಲ್ಯುಡಿಎ ಏನು ಸಲಹೆ ಕೊಡುತ್ತದೆ. ಅದರ ಆಧಾರದ ಮೇಲೆ ಹೊಸ ಡಿಪಿಆರ್ ಮಾಡಬೇಕಿದೆ. ನಮ್ಮ ರಾಜ್ಯದಲ್ಲಿ ಬಹುತೇಕ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತವೆ. ಕೃಷ್ಣಾ, ಘಟಪ್ರಭಾ, ತುಂಗಭದ್ರಾ ಸೇರಿ ಹಲವಾರು ನದಿಗಳು ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುತ್ತವೆ. ಕೆಲ ನದಿಗಳು ಪಶ್ಚಿಮದಲ್ಲಿಯೇ ಹುಟ್ಟಿ ಅರಬ್ಬಿ ಸಮುದ್ರ ಸೇರುತ್ತವೆ. ಅಂತಹ ನದಿಯ ನೀರನ್ನು ಬಳಕೆ ಮಾಡಿಕೊಳ್ಳಲಾಗುವುದು. ತುಂಗಭದ್ರಾ ನದಿಗೆ ಬೇಸಿಗೆಯಲ್ಲಿ ಸಮಸ್ಯೆಯಾಗುತ್ತಿದೆ. ನದಿ ಜೋಡಣೆಯಿಂದ ಸರಿದೂಗಲಿದೆ. ಈ ಯೋಜನೆ ಮಾಡಿದರೆ ಯಾವುದೇ ಮುಳುಗಡೆ ಸಮಸ್ಯೆ ಆಗುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಕಿಸಾನ್ ಸಮ್ಮಾನ್ ಹಣ ಬಿಡುಗಡೆ

ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಶನಿವಾರ ವಾರಣಾಸಿಯಲ್ಲಿ ಬಿಡುಗಡೆ ಮಾಡಿದೆ. ಸುಮಾರು 24 ಸಾವಿರ ಕೋಟಿ ರೂ. 2 ಕೋಟಿ ರೈತರಿಗೆ ದೇಶದಲ್ಲಿ ಸಿಗುತ್ತದೆ. ಹಾವೇರಿ ಜಿಲ್ಲೆಯಲ್ಲಿ 156,433 ರೈತರಿಗೆ 32.67 ಕೋಟಿ ರೂ., ಗದಗ ಜಿಲ್ಲೆಯ 1,7,652 ರೈತರಿಗೆ 22.74 ಕೋಟಿ ರೂ. ಬಂದಿದೆ. ಕರ್ನಾಟಕದ 13 ಲಕ್ಷ ರೈತರಿಗೆ 880 ಕೋಟಿ ರೂ. ಬಂದಿದೆ. ರೈತರ ಖಾತೆಗೆ ಜಮೆ ಆಗಿರುತ್ತದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಾಗಬೇಕು ಎಂದು ಬೊಮ್ಮಾಯಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net