ಪರಿಸರಕ್ಕೆ ಹಾನಿಯಾಗದಂತೆ ನದಿ ಜೋಡಣೆ; ವರದಾ- ಬೇಡ್ತಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸಂಬಂಧಪಟ್ಟವರಿಗೆ ಮನವರಿಕೆ ಮಾಡಲಿ; ಸಂಸದ ಬಸವರಾಜ ಬೊಮ್ಮಾಯಿ

Bommai
Published on

ಹಾವೇರಿ: ನೈಸರ್ಗಿಕ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿ ಆಗದಂತೆ ವರದಾ- ಬೇಡ್ತಿ ನದಿ ಜೋಡಣೆ ಯೋಜನೆಯ ಡಿಪಿಆರ್ ತಯಾರಿಸಲಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡು ಸಂಬಂಧಪಟ್ಟ ಉತ್ತರ ಕನ್ನಡ ಜಿಲ್ಲೆಯ ಜನರು ಹಾಗೂ ಸ್ವಾಮೀಜಿಯ ಜತೆಗೆ ಚರ್ಚಿಸಿ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಾ-ಬೇಡ್ತಿ ನದಿ ಜೋಡಣೆಯ ಬಗ್ಗೆ ನಾನು ಸಭೆ ಮಾಡಿದ ಮೇಲೆ ದೊಡ್ಡ ಪ್ರಮಾಣದ ಚರ್ಚೆ ನಡೆಯುತ್ತಿದೆ. ಉತ್ತರ ಕನ್ನಡದಲ್ಲಿಯೂ ಸಭೆ ನಡೆದಿದೆ. ರಾಜ್ಯದ ನೀರಿನ ಸಂಪತ್ತು ಸದುಪಯೋಗ ಆಗಬೇಕು. ಅದು ಎಲ್ಲಿ ಉಪಯೋಗ ಆಗಬೇಕು, ಅಲ್ಲಿ ಅದು ಬಳಕೆಯಾಗಬೇಕು. ಮಹಾರಾಷ್ಟ್ರದಲ್ಲಿ ಹುಟ್ಟಿದ ಕೃಷ್ಣೆಗೆ ನಾವು ರಾಜ್ಯದಲ್ಲಿ ಯೋಜನೆ ಮಾಡಿದ್ದೇವೆ. ಕರ್ನಾಟಕದಲ್ಲಿ ಹುಟ್ಟಿರುವ ಕಾವೇರಿಗೆ ತಮಿಳುನಾಡಿನಲ್ಲಿ ಯೋಜನೆ ಮಾಡಿದ್ದಾರೆ. ನದಿ ನೀರು ವ್ಯರ್ಥವಾಗಿ ಹೋಗಬಾರದು. ಪ್ರವಾಹ ಉಂಟಾಗಿ ನೀರು ವ್ಯರ್ಥವಾಗಿ ಹೋಗಬಾರದು. ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನದಿ ವಿವಾದಗಳು, ಅಂತಾರಾಜ್ಯ ಜಲ ವಿವಾದಗಳು ಇದ್ದವು. ಈಗ ಅಂತರ್ ಜಿಲ್ಲಾ ನದಿ ವಿವಾದಗಳು ಶುರುವಾಗಿವೆ ಎಂದರು.

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿಗೆ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆಹಾನಿ ಸಮೀಕ್ಷೆ ಮಾಡಿ, ಮಧ್ಯಂತರ ಪರಿಹಾರ ಕೊಡಬೇಕು. ಕೇಂದ್ರಕ್ಕೆ ಬೆಳೆನಷ್ಟದ ವರದಿ ಕಳುಹಿಸಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಪರಿಹಾರ ನೀಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಶಿಗ್ಗಾವಿ ತಾಲೂಕಿನ ರಸ್ತೆಗಳ ಕುರಿತು ಹಾಲಿ ಶಾಸಕರು ಎತ್ತಿರುವ ಆಕ್ಷೇಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿಗ್ಗಾಂವಿ ತಾಲೂಕಿನ ಗ್ರಾಮೀಣ ರಸ್ತೆ, ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾಧ್ಯಮಗಳೇ ಸಮೀಕ್ಷೆ ಮಾಡಲಿ, ನಾವು ಹೆಚ್ಚು ಗುಣಮಟ್ಟದ ರಸ್ತೆಗಳನ್ನು ಮಾಡಿದ್ದೇವೆ ಎಂದು ಹೇಳಿದರು.

ತೊಂದರೆ ಮಾಡುವ ಉದ್ದೇಶವಿಲ್ಲ

ವರದಾ- ಬೇಡ್ತಿ ನದಿ ಜೋಡಣೆಗೆ ಮೊದಲು ಮಾಡಿದ್ದ ಡಿಪಿಆರ್‌ನಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ ಎಂದು ವಿರೋಧ ಮಾಡಿದ್ದರು. ಅದರಿಂದ ಮಾರ್ಪಾಡು ಮಾಡಿ ಯಾವುದೇ ರೀತಿಯ ನಷ್ಟ ಆಗದಂತೆ ಯೋಜನೆ ರೂಪಿಸಿದ್ದೇವೆ. ಇದನ್ನು ಉತ್ತರ ಕನ್ನಡದ ಜನರಿಗೆ ಮಾಹಿತಿ ಕೊಡುವ ಅಗತ್ಯವಿದೆ. ಮತ್ತು ಯಾರಿಗೆ ಆಪತ್ತಿದೆ ಅಲ್ಲಿಯ ಪರಮಪೂಜ್ಯರ ಜತೆಗೆ ಸರ್ಕಾರ ಮಾತನಾಡುವ ಅಗತ್ಯವಿದೆ. ನಾವೂ ಕೂಡ ಅಲ್ಲಿಯ ಜನರ ಮನವೊಲಿಸಲು ಸಂಪೂರ್ಣ ಕೈ ಜೋಡಿಸುತ್ತೇವೆ. ಯಾರಿಗೂ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ. ರಾಜ್ಯ ಸರ್ಕಾರ ಡಿಪಿಆರ್‌ಅನ್ನು ತಕ್ಷಣ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು. ಸೌಹಾರ್ದಯುತವಾಗಿ ಬಗೆಹರಿಸಿ ಯೋಜನೆ ರೂಪಿಸಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.

ಡಿಜೆ ಬಳಕೆಯಿಂದ ಸರ್ಕಾರಕ್ಕೇನು ತೊಂದರೆ ?

ಗಣೇಶೋತ್ಸವದಲ್ಲಿ ಡಿಜೆ ಹಚ್ಚದಂತೆ ಸರ್ಕಾರದ ಸ್ಪಷ್ಟ ಆದೇಶ ಇರುವುದರಿಂದ ಡಿಜೆಗೆ ಅವಕಾಶವಿಲ್ಲ ಎಂದು ಎಸ್‌ಪಿ ಹೇಳಿದ್ದಾರೆ. ಎಲ್ಲ ಧರ್ಮದವರು ತಮ್ಮ ಧರ್ಮದ ಆಚರಣೆ ಮಾಡಲು ಸಂವಿಧಾನದಲ್ಲಿಯೇ ಅವಕಾಶ ಇದೆ. ಡಿಜೆ ಹಚ್ಚುವುದರಿಂದ ಯಾರಿಗೆ ಏನು ಸಮಸ್ಯೆ ಇದೆ. ಕೋರ್ಟ್‌ನವರು ಡೆಸಿಬಲ್ ಕಡಿಮೆ ಮಾಡಬೇಕು ಎಂದು ಹೇಳುತ್ತಾರೆ. ಆ ರೀತಿ ನೋಡಿಕೊಂಡರೆ ಡಿಜೆ ಹಾಕಲು ಯಾವುದೇ ತೊಂದರೆ ಇಲ್ಲ. ಈದ್ ಮಿಲಾದ್ ಶಾಂತಯುತವಾಗಿ ನಡೆಯಿತು. ಅದೇ ರೀತಿ ಗಣೇಶೋತ್ಸವ, ದೀಪಾವಳಿ ಶಾಂತರೀತಿಯಾಗಿ ನಡೆಯಲು ಸರ್ಕಾರ ಅವಕಾಶ ಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಯ ಬಗ್ಗೆ ಗಮನ ಹರಿಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.

ತಪ್ಪಿತಸ್ಥರ ಮೇಲೆ ಕ್ರಮ ಆಗಲಿ

ಈದ್ ಮಿಲಾದ್ ವೇಳೆ ಸವಣೂರಲ್ಲಿ ಪ್ಯಾಲೆಸ್ತೇನ್ ದೇಶದ ಧ್ವಜ ಹಾರಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಇಂತಹ ಆರೋಪ ಬಂದಾಗ ಪೊಲೀಸರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಪೊಲೀಸರ ಮೇಲೆಯೇ ಕ್ರಮ ಕೈಗೊಳ್ಳುವ ಸಂದರ್ಭ ಬರುತ್ತದೆ. ಆದರೆ, ಇಲ್ಲಿ ಅಪರಾಧ ಮಾಡುವವರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹೀಗಾಗಿ, ಅವರು ಭಯವಿಲ್ಲದೇ ತಿರುಗಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net