ಕೇಂದ್ರದಲ್ಲಿ ಕಾಂಗ್ರೆಸ್ ಬಹುಮತ ಹೇಳಿಕೆ ಹಾಸ್ಯಾಸ್ಪದ; ಮೋದಿ ಹೆಸರಿನ ಜತೆಗೆ ನಮ್ಮ ಅವಧಿಯ ಸಾಧನೆ ಹೇಳುವೆ; ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

10 HVR 7 B
Published on

ಹಾವೇರಿ: ಕಾಂಗ್ರೆಸ್‌ನವರು ಕೇಂದ್ರದಲ್ಲಿ ಕಾಂಗ್ರೆಸ್ ಬಹುಮತ ಪಡೆಯುತ್ತದೆ ಎಂದು ನೀಡುವ ಹೇಳಿಕೆಗಳೆಲ್ಲ ಹಾಸ್ಯಾಸ್ಪದ. ಬಹುಮತಕ್ಕೆ 272 ಸ್ಥಾನ ಬೇಕು. ಅಷ್ಟು ಸ್ಥಾನಗಳಿಗೆ ಸ್ಪರ್ಧಿಸುವ ಶಕ್ತಿಯೇ ಇಲ್ಲದವರು ಊರೆಲ್ಲ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಚುನಾವಣೆಯಲ್ಲಿ ಬಿಜೆಪಿಯವರು ಕೇವಲ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳುತ್ತಿದ್ದಾರೆ’ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು, ಇದು ಲೋಕಸಭಾ ಚುನಾವಣೆ, ರಾಷ್ಟ್ರದ ಚುನಾವಣೆ. ಮೋದಿಯವರ ಹೆಸರು ಹೇಳಲೇಬೇಕು ಹೇಳುತ್ತೇವೆ. ಅದರ ಜತೆಗೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸೇರಿಸಿ ಮತ ಕೇಳುತ್ತೇವೆ ಎಂದರು.
ಕ್ಷೇತ್ರದಲ್ಲಿ ನೀರಾವರಿ ಸಾಧನೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ನೀರಾವರಿ ಮಾಡಿರುವುದು ಸಾಮಾನ್ಯ ಮಾತಲ್ಲ. ಇದರಿಂದ ಹಾನಗಲ್ಲ, ಹಿರೆಕೆರೂರ, ರಾಣೆಬೆನ್ನೂರ ತಾಲೂಕುಗಳಲ್ಲಿ ನೀರಾವರಿಯಾಗಿದೆ. ಈ ಕೆಲಸ ಸಾಧ್ಯವಿಲ್ಲ ಎಂದು ಹೇಳಿದ್ದರು. ಅದನ್ನು ಮಾಡಿ ತೋರಿಸಿದ್ದೇನೆ. ಶಿಗ್ಗಾಂವಿ ಕ್ಷೇತ್ರ ಬಿಟ್ಟು ಎಂಟು ಏತ ನೀರಾವರಿ ಯೋಜನೆ ಮಾಡಿದ್ದೇನೆ ಎಂದರು.
ಇನ್ನು ನಟ ಪ್ರಕಾಶ ರೈ ಪ್ರಧಾನಿ ಮೋದಿ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ ರೈ ಯಾವಾಗ ಫೇಸ್ ರೀಡರ್ ಆದರು. ಮೋದಿಯವರು ವಿಶ್ವದ ನಾಯಕ ಅವರು ನೋಡುವ ದೃಷ್ಟಿಕೋನ ಹಾಗಿದೆ ಎಂದು ಹೇಳಿದರು.
ಮೋದಿ ಉಕ ಪ್ರವಾಸ
ಏಪ್ರಿಲ್ 25 ಅಥವಾ 26ರ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಸ ಮಾಡಲಿದ್ದು, ಎರಡು ಅಥವಾ ಮೂರು ಲೋಕಸಭೆಗೆ ಒಂದು ಕ್ಲಸ್ಟರ್ ಮಾಡಿ ಪ್ರಚಾರ ಮಾಡಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net