

ಹಾವೇರಿ: ದೇಶದಲ್ಲಿ ಕಾನೂನು ಸುವಸ್ಥೆ ಸರಿಯಾಗಿದ್ದರೆ ಬಂಡವಾಳ ಹೂಡಿಕೆ ಹೆಚ್ಚಳವಾಗಲಿದೆ. ನಮ್ಮ ದೇಶದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲು ಈ ದೇಶದ ಕಾನೂನು ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಕೀಲರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹಾವೇರಿ ಜಿಲ್ಲಾ ವಕೀಲರ ಸಂಘದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಕೀಲ ವೃತ್ತಿ ಬಹಳ ವಿಶಿಷ್ಟ ವೃತ್ತಿ, ನ್ಯಾಯದಾನ ಶ್ರೇಷ್ಠವಾಗಿರುವ ದಾನ. ಪ್ರಜಾಪ್ರಭುತ್ವದಲ್ಲಿ ಮುಕ್ತವಾದ ಅವಕಾಶ ಸ್ವಾತಂತ್ರ್ಯ ಎಷ್ಟಿದೆಯೋ ಅಷ್ಡೇ ಕರ್ತವ್ಯಗಳೂ ಇವೆ. ನಮ್ಮ ಹಕ್ಕುಗಳಿಗೆ ಎಷ್ಟು ಗೌರವಿಸುತ್ತೇವೊ, ಕರ್ತವ್ಯಗಳಿಗೂ ಅಷ್ಟೇ ಗೌರವಿಸಬೇಕು ಎಂದರು.
ನಾನು ವಕೀಲರ ಕುಟುಂಬದಿಂದ ಬಂದವನು. ನಮ್ಮ ಅಜ್ಜ ಹಾಗೂ ತಂದೆ ವಕೀಲರಾಗಿದ್ದರು. ನಾನು ಹತ್ತಿರದಿಂದ ವಕೀಲರ ವೃತ್ತಿಯನ್ನು ನೋಡಿದ್ದೇನೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಫಾಲಿ ನಾರಿಮನ್, ಸೋಲಿಸೊರಾಬ್ಜಿ ಅವರಂತಹ ಹಿರಿಯ ವಕೀಲರ ಸಂಪರ್ಕ ಪಡೆಯಲು ಅನುಕೂಲವಾಯಿತು ಎಂದರು.
ದೇಶದ ಸಂವಿಧಾನ ರಚನೆಯಲ್ಲಿ ನ್ಯಾಯವಾದಿಗಳ ಪಾಲು ದೊಡ್ಡದಿದೆ. ಅಂಬೇಡ್ಕರ್ ಅವರೇ ಸ್ವತ ನ್ಯಾಯವಾದಿಗಳಾಗಿದ್ದರು. ಅವರು ಜಗತ್ತಿನ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ಆರಂಭದಲ್ಲಿ ಸಂಸತ್ತಿಗೆ ಆಯ್ಕೆ ಆಗುವುದರಲ್ಲಿ ವಕೀಲರ ಸಂಖ್ಯೆ ಹೆಚ್ಚಿತ್ತು. ಹಂತ ಹಂತವಾಗಿ ಕಡಿಮೆಯಾಗುತ್ತ ಬಂದಿದೆ ಎಂದರು.
ನಾನು ಕಾನೂನು ಸಚಿವನಾಗಿ ಕೆಲಸ ಮಾಡುವ ಅವಕಾಶ ದೊರೆತಿತ್ತು. ‘ಕ್ರೈಮ್ ಲೀಡ್ಸ್ ಲಾ’ ಎನ್ನುವ ಗಾದೆ ಮಾತಿದೆ. ಇತ್ತೀಚೆಗೆ ಸೈಬರ್ ಕ್ರೈಮ್ ಹೆಚ್ಚಳವಾಗುತ್ತಿದೆ. ಅದನ್ನು ಪತ್ತೆ ಹಚ್ಚಲು ನಾವು ಕಾನೂನು ತಿದ್ದುಪಡಿ ತಂದೆವು. ಅದರಿಂದ ಸೈಬರ್ ಕ್ರೈಮ್ ನಿಯಂತ್ರಿಸಲು ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಂಬಣ್ಣ ಜತ್ತಿ, ಉಪಾಧ್ಯಕ್ಷ ಸಿ.ಪಿ.ಜಾವಗಲ್ಲ, ಪಿ.ಎಸ್.ಹೆಬ್ಬಾಳ, ಎನ್.ಎಸ್.ಕಾಳೆ, ಮತ್ತಿತರರು ಉಪಸ್ಥಿತರಿದ್ದರು.
ಟೆಕ್ಸ್‌ಟೈಲ್ ಹಬ್ ಆಗಿ ಹಾವೇರಿ ಅಭಿವೃದ್ಧಿ ಮಾಡುವೆ * ಬೊಮ್ಮಾಯಿ
ಹಾವೇರಿ: ಶಿಗ್ಗಾಂವಿಯಲ್ಲಿ ನನ್ನದೂ ಗಾರ್ಮೆಂಟ್ ಕಾರ್ಖಾನೆ ಇದೆ. ಅದರಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದ್ದೇವೆ. ಹಾವೇರಿಯನ್ನು ಭವಿಷ್ಯದಲ್ಲಿ ಟೆಕ್ಸ್‌ಟೈಲ್ ಹಬ್ ಆಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಿದ್ದೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಂಗಳವಾರ ಲಾರಿ ಮಾಲೀಕರು, ಗಾರ್ಮೆಂಟ್ ಕಾರ್ಮಿಕರು, ಆಟೊ ರಿಕ್ಷಾ ಚಾಲಕರು, ಮಾಲೀಕರ ಸಂಘದ ಸದಸದ್ಯರೊಂದಿಗೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದ ಮೇಲೆ ದೇಶದ ಅಭಿವೃದ್ಧಿ ವೇಗ ಹೆಚ್ಚಿದೆ. ದೇಶದ ಅಭಿವೃದ್ಧಿ ಯಲ್ಲಿ ಸಾರಿಗೆ ವಲಯ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಿಂದ ಸಾರಿಗೆ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಇದರಿಂದ ದೇಶದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ರಸ್ತೆ ಬದಿಗೆ ಸ್ವಚ್ಛತೆ ಕಾಪಾಡಲು ಡಸ್ಟ್‌ಬಿನ್, ಶೌಚಗೃಹ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ ಎಂದರು.
ಲಾರಿ ಮಾಲಿಕರ ಸಂಘದ ಅಧ್ಯಕ್ಷ ಗಣೇಶ ಹೂಗಾರ, ಆರ್‌ಟಿಒ ಏಜೆಂಟರ ಸಂಘದ ಅಧ್ಯಕ್ಷ ಪ್ರಸನ್ನ ಧಾರವಾಡಕರ, ಆಟೋ ಕಾರು ಸ್ಟ್ಯಾಂಡ್ ಮಾಲೀಕರ ಸಂಘದ ಅಧ್ಯಕ್ಷ ವಿರೂಪಾಕ್ಷ ದಳಗಾರ, ಇತರರು ಹಾಜರಿದ್ದರು.