

ಹಾವೇರಿ: ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕುರಿತು ಅವರು ದಾಖಲೆ ಕೊಟ್ಟು, ನಂತರ ಮಾತನಾಡಲಿ ಎಂದು ಸವಾಲು ಹಾಕಿದರು. ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಸೇತುವೆ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇತ್ತು. ಆ ಸಂದರ್ಭದಲ್ಲಿ ಚುನಾವಣೆ ಆಯೋಗಕ್ಕೆ ಯಾವುದೇ ಆಕ್ಷೇಪಣೆ ಬಂದಿಲ್ಲ. ಈಗ ಸಂವಿಧಾನದ ಆಧಾರದಲ್ಲಿ ಸ್ಥಾಪಿತವಾದ ಸಂಸ್ಥೆಗಳ ಮೇಲೆ ಪ್ರಹಾರ ಆಗುತ್ತಿದೆ. ನರೇಂದ್ರ ಮೋದಿ ನಾಯಕತ್ವ ಬೆಂಬಲಿಸಿ ಜನತೆ ಮತ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಹಿನ್ನಡೆ ಮುಚ್ಚಿಕೊಳ್ಳಲು ಈ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು. ಬಾಕ್ಸ್ ಮುಡಾ ಇನ್ನೂ ಜೀವಂತ ಮುಡಾ ಪ್ರಕರಣದಲ್ಲಿ ದೇಸಾಯಿ ಕಮಿಟಿ ವರದಿ ಕ್ಲೀನ್‌ಚೀಟ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ದೇಸಾಯಿ ವರದಿ ಹೇಗೆ ಕ್ಲೀನ್ ಚೀಟ್ ಕೊಟ್ಟಿದೆ ಎಲ್ಲ ಗೊತ್ತಿದೆ. ಕೋರ್ಟ್‌ನಲ್ಲಿ ಇ.ಡಿ ಪ್ರವೇಶಕ್ಕೆ ಅಷ್ಟೇ ಕ್ಲೀನ್ ಚೀಟ್ ಕೊಟ್ಟಿದೆ. ಅದರ ಅರ್ಥ ಮುಡಾದಲ್ಲಿ ಎಲ್ಲದರಲ್ಲೂ ಕ್ಲೀನ್ ಚೀಟ್ ಕೊಟ್ಟಿದೆ ಅಂತಲ್ಲ. ಮುಡಾ ವಿಚಾರದಲ್ಲಿ ಇನ್ನೂ ಹಲವಾರು ವಿಷಯಗಳಿವೆ. ಲೋಕಾಯುಕ್ತ ವರದಿ ಅಂತಿಮಗೊಂಡು ಕೋರ್ಟ್ ಮುಂದೆ ಬರುತ್ತದೆ. ಆಗ ಚರ್ಚೆ ಆಗುತ್ತದೆ. ಆಗ ಎಲ್ಲ ವಿಚಾರಗಳು ಗೊತ್ತಾಗಲಿವೆ ಎಂದರು.
ಆಲಮಟ್ಟಿ ಎತ್ತರ ಟ್ರಿಬುನಲ್ ಆದೇಶ ಅಂತಿಮ
ಆಲಮಟ್ಟಿ ಜಲಾಶಯದ ಎತ್ತರದ ವಿಚಾರ ಈಗಾಗಲೇ ಬಹಳಷ್ಟು ಸ್ಪಷ್ಟವಾಗಿದೆ. ಆದರೂ ಮಹಾರಾಷ್ಟ್ರ ಸರ್ಕಾರ ವಿರೋಧಿಸುವುದು ಸರಿಯಲ್ಲ. ಮಹಾರಾಷ್ಟ್ರ ಸರ್ಕಾರ ಸ್ಥಳೀಯರ ಒತ್ತಡದಿಂದ ಸುಮ್ಮನೆ ಕ್ಯಾತೆ ತೆಗೆದಿದೆ. ಈ ಮೊದಲೇ ಸಾಂಗ್ಲಿ, ಕೊಲ್ಲಾಪುರ ಭಾಗದಲ್ಲಿ ಪ್ರವಾಹ ಸೃಷ್ಟಿಯಾಗುತ್ತಿತ್ತು. ಈ ವಿಚಾರ ಕೃಷ್ಣ ವಾಟರ್ ಡಿಸ್ಟ್ರಿಬ್ಯೂಟ್ ಟ್ರಿಬುನಲ್‌ನಲ್ಲಿ ಚರ್ಚೆ ಆಗಿತ್ತು. 2010ರ ವರದಿಯಲ್ಲಿ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ.
ಪ್ರವಾಹ ಸೃಷ್ಟಿ ಬಗ್ಗೆ ಜಂಟಿ ಸಮೀಕ್ಷೆ ಆಗಿದೆ. ಕರ್ನಾಟಕ, ಮಹಾರಾಷ್ಟ್ರ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಗಳು ಸೇರಿ ಸರ್ವೇ ಮಾಡಿವೆ. ಸರ್ವೇ ಬಳಿಕ ದಾಖಲೆ ಸಮೇತ ಬಂದಮೇಲೆ ಟ್ರಿಬುನಲ್ ಆದೇಶ ಕೊಟ್ಟಿದೆ. ಟ್ರಿಬುನಲ್ ಆದೇಶವೇ ಅಂತಿಮ. ಒಂದು ಸಲ ಟ್ರಿಬುನಲ್ ಆದೇಶ ಬಂದಮೇಲೆ ಬದಲಾವಣೆ ಮಾಡುವ ಅಧಿಕಾರವಿಲ್ಲ. ಗೆಜೆಟ್ ನೋಟಿಫಿಕೇಶನ್ ಮಾಡುವಂತೆ ಮಹಾರಾಷ್ಟ್ರ ಒತ್ತಾಯ ಮಾಡಿದೆ. ನಾವೂ ಒತ್ತಾಯ ಮಾಡಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.