ಹಾವೇರಿ: ಮಹದಾಯಿ ನದಿಯ ಹನಿ ನೀರನ್ನು ರಾಜ್ಯಕ್ಕೆ ಕೊಡಲ್ಲ ಎಂದು 2009ರಲ್ಲಿ ಅಂದಿನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು. ಮಹದಾಯಿ ಯೋಜನೆ ಹಿನ್ನಡೆ ಆಗಲು ಕಾಂಗ್ರೆಸ್ ಕಾರಣ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ಸಚಿವ ಎಚ್.ಕೆ.ಪಾಟೀಲರು ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಗತ್ಯ ಇಲ್ಲದಿದ್ದರೂ ಕಾಂಗ್ರೆಸ್‌ನವರು ಮಹದಾಯಿ ನ್ಯಾಯಾಧೀಕರಣ ಮಾಡಿದರು. ಚೇರ್ಮನ್‌ರಿಗೆ ಒಂದು ಕಚೇರಿಯನ್ನೂ ಮಾಡಲಿಲ್ಲ. ಎಲ್ಲದಕ್ಕೂ ವಿಳಂಬ ಮಾಡಿದರು. ಟ್ರಿಬುನಲ್‌ನಲ್ಲಿ ನಾವೇ ಬರೆದುಕೊಟ್ಟು, ನಾವು ನಿರ್ಮಿಸಿದ ಇಂಟರ್ ಲಿಂಕಿಂಗ್ ಕೆನಾಲ್‌ಗೆ ಗೋಡೆ ಕಟ್ಟಿಸಿದರು. ಈಗ ವೈಲ್ಡ್ ಲೈಫ್ ಬೋರ್ಡ್‌ನ ಅನುಮತಿ ಬೇಕಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉತ್ತರಿಸಿದ್ದಾರೆ. ಸೂಕ್ತ ರೀತಿಯಲ್ಲಿ ಮುಂದುವರಿದರೆ ಖಚಿತವಾಗಿ ಅನುಮತಿ ಸಿಗುತ್ತದೆ ಎಂದರು.
11 ವಿಧೇಯಕಗಳನ್ನು ವಾಪಸ್ ಕಳಿಸಿದ್ದಕ್ಕೆ ರಾಜ್ಯಪಾಲರ ವಿರುದ್ಧ ರಾಜ್ಯ ಸರ್ಕಾರದಿಂದ ಕಾನೂನು ಹೋರಾಟಕ್ಕೆ ಚಿಂತನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾನೂನು ಹೋರಾಟ ಮಾಡಲು ಅವಕಾಶ ಇದೆ, ಮಾಡಲಿ. ವಿಧೇಯಕಗಳು ಯಾಕೆ ವಾಪಸ್ ಕಳುಹಿಸಲಾಯಿತು ಎಂಬುದು ಬಹಿರಂಗ ಆಗುತ್ತದೆ. ಬೆಂಗಳೂರಿನಲ್ಲಿ ಬಿಲ್ಡಿಂಗ್ ಮೇಲೆ ಶೇ.40ರಷ್ಟು ಬಿಲ್ಡಿಂಗ್ ಕಟ್ಟಲು ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ಅತ್ಯಂತ ಕಡಿಮೆ ದರದ ದರ ನಿಗದಿಪಡಿಸಿದ್ದಾರೆ. ಇದರಿಂದ ಒಳಚರಂಡಿ, ರಸ್ತೆ, ಇತರ ಸಮಸ್ಯೆ ಉಂಟಾಗುತ್ತದೆ ಎಂದರು.
ಬೆಂಗಳೂರಿಗೆ ಶರಾವತಿ ನೀರು ಯೋಜನೆ ವಿಚಾರದ ಕುರಿತು ಈ ಬಗ್ಗೆ ನಾನು ಏನೂ ಕಮೆಂಟ್ ಮಾಡುವುದಿಲ್ಲ. ಯಾಕೆಂದರೆ ಅದಕ್ಕೊಂದು ಅರ್ಥ ಇದೆ ಎಂದರು.