ಬರ ಪರಿಹಾರ ವಿಚಾರದಲ್ಲಿ ರಾಜಕಾರಣ ಸಲ್ಲ; ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

27 HVR 8
Published on

ಹಾವೇರಿ: ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುವುದನ್ನು ಬಿಡಬೇಕು. ಚುನಾವಣಾ ನೀತಿಸಂಹಿತೆ ಜಾರಿಯಲಿದ್ದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯಕ್ಕೆ ಬರ ಪರಿಹಾರ ನೀಡಿರುವುದು, ರಾಜ್ಯದ ರೈತರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇರುವ ಕಾಳಜಿ ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಪಡೆಯಲು ಇರುವ ನಿಯಮಗಳನ್ನು ರಾಜ್ಯ ಸರ್ಕಾರದವರು ಸರಿಯಾಗಿ ಪಾಲನೆ ಮಾಡಲಿಲ್ಲ. ಅದರಲ್ಲಿ ರಾಜಕಾರಣ ಮಾಡುತ್ತ ಕಾಲಹರಣ ಮಾಡಿದರು. ಕೇಂದ್ರ ಸರ್ಕಾರ ಯಾವತ್ತೂ ಪರಿಹಾರ ಕೊಡುವುದಿಲ್ಲ ಎಂದು ಹೇಳಿಲ್ಲ ಇವರು ಪರಿಹಾರ ಕೊಡಲು ಕೇಳಬೇಕಾದ ರೀತಿಯಲ್ಲಿ ಕೇಳಿಲ್ಲ. ಆದರೂ ಕೇಂದ್ರ ಸರ್ಕಾರ ಚುನಾವಣಾ ನೀತಿಸಂಹಿತೆ ಇರುವುದರಿಂದ ಆಯೋಗದ ಅನುಮತಿ ಪಡೆದು ಬರ ಪರಿಹಾರ ಬಿಡುಗಡೆ ಮಾಡಿದೆ ಎಂದರು.
ಕಾಂಗ್ರೆಸ್‌ನವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಕೊನೆಯ ಅಸ್ತ್ರವಾಗಿ ಭಾವನಾತ್ಮಕಾಗಿ ಸೆಳೆಯುವ ತಂತ್ರ ಮಾಡುತ್ತಿದ್ದಾರೆ. ದಲಿತರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಮೋದಿಯವರು ಪ್ರಧಾನಿ ಆದ ತಕ್ಷಣ ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. ಯಾರೇ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಕಾಂಗ್ರೆಸ್‌ನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆದಿರುವ 14 ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ 14ರಲ್ಲೂ ಗೆಲ್ಲುವ ವಿಶ್ವಾಸ ಇದೆ ಎಂದು ನಮ್ಮ ನಾಯಕರು ವ್ಯಕ್ತಪಡಿಸಿದ್ದಾರೆ. ಒಂದೆರಡು ಕ್ಷೇತ್ರಗಳಲ್ಲಿ ಫೈಟ್ ಇದೆ. ಕೊನೆ ಗಳಿಗೆಯಲ್ಲಿ ಅಲ್ಲಿಯೂ ನಮ್ಮ ಪರವಾದ ವಾತವಾರಣ ಬಂದಿದೆ. ಅದರ ಪರಿಣಾಮ ಉತ್ತರ ಕರ್ನಾಟಕ ಭಾಗದಲ್ಲೂ ಆಗುತ್ತದೆ ಎಂದು ಹೇಳಿದರು.
ಮಾನೆ ಅವರ ಸಾಧನೆ ಹೇಳಿಕೊಳ್ಳಲಿ
ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆ ಹಾನಗಲ್ಲ ಕ್ಷೇತ್ರಕ್ಕೆ ಬೊಮ್ಮಾಯಿಯವರ ಕೊಡುಗೆ ಏನು ? ಎಂದು ಮಾಡಿರುವ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಅದನ್ನು ಶ್ರೀನಿವಾಸ ಮಾನೆ ಅವರು ಹಾನಗಲ್ಲ ಕ್ಷೇತ್ರದ ಜನತೆಯನ್ನು ಕೇಳಲಿ. 600 ಕೋಟಿ ರೂ. ವೆಚ್ಚದಲ್ಲಿ ಸಮ್ಮಸಗಿ, ಮಾರನಬೀಡ ಏತ ನೀರಾವರಿ ಮಾಡಿದ್ದು ಯಾರು ಎಂದು ತಿಳಿದುಕೊಳ್ಳಲಿ. ತಿಳವಳ್ಳಿ ಏತ ನೀರಾವರಿ, ಧರ್ಮಾ ಕಾಲುವೆ ಆಧುನೀಕರಣ ಮಾಡಿದಾಗ ಜಲಸಂಪನ್ಮೂಲ ಸಚಿವರು ಯಾರಿದ್ದರು ಎಂಬುದನ್ನು ಮಾನೆಯವರು ತಿಳಿದುಕೊಳ್ಳಲಿ. ಅವರ ಸಾಧನೆ ಹೇಳಿಕೊಳ್ಳಲು ಅವರ ಬಳಿ ಏನೂ ಇಲ್ಲ. ಹೀಗಾಗಿ ಅವರು ನನ್ನ ಬಗ್ಗೆಯೇ ಮಾತನಾಡುತ್ತಾರೆ. ಮೊದಲು ಅವರ ಸಾಧನೆ ಏನೆಂದು ಹೇಳಿಕೊಳ್ಳಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net